ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಯುಎಇ (ಸಂಯುಕ್ತ ಅರಬ್ ಒಕ್ಕೂಟ) ಖಂಡಿಸಿದೆ. ಹಮಾಸ್ ದಾಳಿಯನ್ನು ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರವಾಗಿದೆ.
ಜನಸಂಖ್ಯಾ ಕೇಂದ್ರಗಳ ಮೇಲೆ ಸಾವಿರಾರು ರಾಕೆಟ್ಗಳ ಹಾರಾಟ ಸೇರಿದಂತೆ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಹಮಾಸ್ನ ದಾಳಿಗಳು ಗಂಭೀರ ಸ್ವರೂಪದ್ದಾಗಿವೆ. ಇಸ್ರೇಲಿ ನಾಗರಿಕರನ್ನು ಅವರ ಮನೆಗಳಿಂದ ಒತ್ತೆಯಾಳುಗಳಾಗಿ ಅಪಹರಿಸಿರುವುದು ಕಳವಳಕಾರಿಯಾಗಿದೆ. ಎರಡೂ ಕಡೆಯ ನಾಗರಿಕರು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಸಂಪೂರ್ಣ ರಕ್ಷಣೆ ಹೊಂದಿರಬೇಕು. ಎಂದಿಗೂ ಯಾರೂ ಸಂಘರ್ಷಕ್ಕೆ ಗುರಿಯಾಗಬಾರದು ಎಂದು ಯುಎಇ ವಿದೇಶಾಂಗ ಸಚಿವಾಲಯ ಖಂಡನೆ ವ್ಯಕ್ತಪಡಿಸಿದೆ.
ದಾಳಿಯ ಬಲಿಪಶುಗಳ ಕುಟುಂಬಗಳಿಗೆ ಯುಎಇ ತನ್ನ ಸಂತಾಪ ವ್ಯಕ್ತಪಡಿಸುತ್ತದೆ. ಎರಡೂ ಕಡೆಯ ಈ ಮುಖಾಮುಖಿಯನ್ನು ತಡೆಗಟ್ಟಲು ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ. ಹಿಂಸಾಚಾರದಿಂದ ಆಗಿರುವ ಜೀವಹಾನಿಗೆ ತೀವ್ರವಾಗಿ ದುಃಖಿಸುತ್ತದೆ. ನಾಗರಿಕ ಜೀವನ ಮತ್ತು ಸೌಲಭ್ಯಗಳ ಮೇಲೆ ಪರಿಣಾಮ ಬೀರುತ್ತಿರುವ ಹಿಂಸಾಚಾರ ಕೊನೆಗಾಣಿಸಬೇಕು ಎಂದು ಯುಎಇ ಸಲಹೆ ನೀಡಿದೆ.
ಎಲ್ಲಾ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಯುಎಇ ನಿಕಟ ಸಂಪರ್ಕದಲ್ಲಿದೆ. ಪರಿಸ್ಥಿತಿಯನ್ನು ತ್ವರಿತವಾಗಿ ತಗ್ಗಿಸಿ ಶಾಂತಿ ಪುನಃಸ್ಥಾಪಿಸಲು, ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳು ಶಾಂತಿ ಮಾತುಕತೆಗೆ ಮರಳಬೇಕು. ಪ್ರತಿಯೊಬ್ಬರೂ ಶಾಂತಿ ಮತ್ತು ಘನತೆಯಿಂದ ಬದುಕಲು ಅರ್ಹರು ಎಂದು ಒತ್ತಿ ಹೇಳಿದೆ.