ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದ ಕೊನೆಯ ದಿನವಾದ ಬುಧವಾರದಂದು 16 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ.
ಬುಧವಾರದಂದು ಬಿಡುಗಡೆಯಾದ ಒತ್ತೆಯಾಳುಗಳ ಪೈಕಿ ಅಪ್ರಾಪ್ತ ವಯಸ್ಕರು ಮತ್ತು ಮಹಿಳೆಯರು ಸೇರಿದ್ದಾರೆ. ಈ ಒಪ್ಪಂದದ ಹೊರತಾಗಿ, ಬಿಡುಗಡೆಯಾದವರಲ್ಲಿ ಇಬ್ಬರು ರಷ್ಯಾದ ನಾಗರಿಕರು, ನಾಲ್ವರು ಥಾಯ್ ನಾಗರಿಕರು ಮತ್ತು ಇಸ್ರೇಲಿ ಅಮೆರಿಕನ್ ಲಿಯಾಟ್ ಬೆನಿನ್ ಕೂಡ ಸೇರಿದ್ದಾರೆ.
ಕತಾರ್ ಮಧ್ಯಸ್ಥಿಕೆಯೊಂದಿಗೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ನಾಲ್ಕು ದಿನಗಳ ಕದನ ವಿರಾಮ ಸೋಮವಾರ ರಾತ್ರಿ ಕೊನೆಗೊಳ್ಳಬೇಕಿತ್ತು. ಆದರೆ ಅದನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆಯಲ್ಲಿ ಕದನ ವಿರಾಮದ ಕೊನೆಯ ದಿನವಾದ ಬುಧವಾರದಂದು ಕೂಡ 16 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ.
ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯ ನಿರ್ಣಾಯಕ ಒಪ್ಪಂದದ ಭಾಗವಾಗಿ ನಾಲ್ಕು ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ ನೀಡಿತ್ತು. ಈ ಒಪ್ಪಂದದ ಭಾಗವಾಗಿ 3 ಹಾಗೂ 1ರ ಅನುಪಾತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಆರಂಭಗೊಂಡಿತ್ತು. ಅಂದರೆ ಹಂತ, ಹಂತವಾಗಿ ಹಮಾಸ್ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್ ಕೈದಿಗಳ ಬಿಡುಗಡೆ ಮಾಡಲು ಒಪ್ಪಿಗೆಯಾಗಿತ್ತು. ಅದರ ಅನ್ವಯ ಕದನ ವಿರಾಮ ಕಳೆದ ಶುಕ್ರವಾರ ಆರಂಭಗೊಂಡು, ಬುಧವಾರ ಕೊನೆಗೊಂಡಿದೆ.