ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಹಾಗೂ ಹಮಾಸ್ ಉಗ್ರರರ ನಡುವಿನ ಸಂಘರ್ಷ ಮುಂದುವರೆದಿದೆ. ಈ ನಡುವೆಯೇ ಗಾಜಾ ಪಟ್ಟಿಯಲ್ಲಿರುವ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಮಾನವೀಯ ಕಾರಣಗಳಿಗಾಗಿ ಅವರನ್ನು ಬಿಡುಗಡೆ ಮಾಡಿರುವುದಾಗಿ ಸೋಮವಾರ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹೇಳಿದೆ.
ನುರಿತ್ ಕೂಪರ್(85) ಮತ್ತು ಯೋಚೆವೆಡ್ ಲಿಫ್‌ಶಿಟ್ಜ್(79) ಬಿಡುಗೊಂಡ ಇಸ್ರೇಲಿ ಮಹಿಳೆಯರು ಎಂದು ಇಸ್ರೇಲಿ ಪ್ರಧಾನಿ ಕಚೇರಿ ತಿಳಿಸಿದೆ.
ಮಹಿಳೆಯರ ಕುಟುಂಬ ಇಸ್ರೇಲ್‌ನ ನಿರ್ ಓಜ್ ಕಿಬ್ಬುತ್ಜ್ ಪ್ರದೇಶದಲ್ಲಿ ವಾಸವಾಗಿತ್ತು. ಅಕ್ಟೋಬರ್ 7ರಂದು ನಡೆದ ದಾಳಿಯಲ್ಲಿ ಇವರ ಕುಟುಂಬವನ್ನು ಒತ್ತೆಯಾಳುಗಳಾನ್ನಾಗಿ ಇಟ್ಟುಕೊಳ್ಳಲಾಗಿತ್ತು.
ಇದೀಗ ಇಬ್ಬರು ಮಹಿಳಾ ಒತ್ತೆಯಾಳುಗಳನ್ನು ಇಸ್ರೇಲ್ ಸೇನೆಗೆ ಹಸ್ತಾಂತರಿಸಲಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲ್ ಸರ್ಕಾರ ದೃಢಪಡಿಸಿದೆ.
ಇಸ್ರೇಲ್ ಸೇರಿ ಹಲವು ದೇಶಗಳ 200ಕ್ಕೂ ಹೆಚ್ಚು ಜನರನ್ನು ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.