ವ್ಯಾಪಾರಕ್ಕೂ ಕುತ್ತು ತಂದ ದೆಹಲಿ ಮಾಲಿನ್ಯ: ಪ್ರಧಾನಿಗೆ ಪತ್ರ ಬರೆದ ʻಸಿಟಿಐʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ವಾಯುಮಾಲಿನ್ಯ ವ್ಯಾಪಾರಕ್ಕೂ ಕಂಟಕವಾಗುತ್ತಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (ಸಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ದಿನನಿತ್ಯ ಬಿಡಿ, ಹಬ್ಬ ಹರಿದಿನಗಳಲ್ಲಿಯೂ ವ್ಯಾಪಾರ ಕುಸಿತದ ಬಗ್ಗೆ ಆತಂಕ ಹೊರಹಾಕಿರುವ ಸಿಟಿಐ ಈ ಬಗ್ಗೆ ಚರ್ಚಿಸಲು ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರಗಳೊಂದಿಗೆ ತುರ್ತು ಸಭೆ ನಡೆಸಬೇಕೆಂದು ಒತ್ತಾಯಿಸಿದೆ.

ಮಾಲಿನ್ಯದಿಂದಾಗಿ ಹಬ್ಬ ಹರಿದಿನಗಳಿದ್ದರೂ ವ್ಯಾಪಾರ ಕುಸಿಯುತ್ತಿದೆ. ಕೇಂದ್ರ ಸರ್ಕಾರವು ಎಲ್ಲಾ ಸರ್ಕಾರಗಳ ಸಹಯೋಗದೊಂದಿಗೆ ವಾಯು ಮಾಲಿನ್ಯದ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಮಟ್ಟ ತಲುಪಿದ್ದು, ಜನರು ಶಾಪಿಂಗ್‌ಗಾಗಿ ಮಾರುಕಟ್ಟೆಗಳಿಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಎನ್‌ಸಿಆರ್‌ನಿಂದ ದೆಹಲಿ ತಲುಪುವವರ ಸಂಖ್ಯೆ 3 ರಿಂದ 4 ಲಕ್ಷದ ನಡುವೆ ಇದ್ದದ್ದು ಈಗ ಒಂದು ಲಕ್ಷಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಈಗ ಮದುವೆ ಸೀಸನ್‌ ಇರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಚೆನ್ನಾಗಿದೆ. ಬೇರೆ ನಗರಗಳಿಂದಲೂ ಗ್ರಾಹಕರು ದೆಹಲಿಗೆ ಬರುತ್ತಾರೆ. ಮಾಲಿನ್ಯ ಸುದ್ದಿ ಕೇಳಿ ಜನರು ಬರಲು ಬಯಸುತ್ತಿಲ್ಲ. ಹಲವು ಜನರಿಗೆ ಉಸಿರಾಡಲು ತೊಂದರೆಯಾಗುತ್ತಿದೆʼ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಾಲಿನ್ಯವು ದೆಹಲಿಯಲ್ಲಿ ಮಾತ್ರವಲ್ಲದೆ ಎನ್‌ಸಿಆರ್ ನಗರಗಳಾದ ನೋಯ್ಡಾ, ಫರಿದಾಬಾದ್, ಗುರ್ಗಾಂವ್ ಮತ್ತು ಸೋನಿಪತ್‌ನಲ್ಲಿಯೂ ಸಹ ಸಮಸ್ಯೆಯಾಗಿದ್ದು, ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಮನವಿ ಮಾಡಿದೆ.

ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ದೆಹಲಿ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡದ ಹೊರತು ದೆಹಲಿ ಎನ್‌ಸಿಆರ್‌ಗೆ ಮಾಲಿನ್ಯವನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನೂ ಪತ್ರದಲ್ಲಿ ಒತ್ತಿ ಹೇಳಿದೆ. ದೆಹಲಿಯ 20 ಲಕ್ಷ ವ್ಯಾಪಾರಿಗಳು ಸಂಪೂರ್ಣವಾಗಿ ಸರ್ಕಾರದ ಜೊತೆಗಿದ್ದು, ಸರ್ಕಾರವು ಮಾರುಕಟ್ಟೆಗಳನ್ನು ತೆರೆಯಲು ವಿಭಿನ್ನ ಸಮಯವನ್ನು ಮಾಡಿದರೆ, ದೆಹಲಿಯ ಎಲ್ಲಾ ಮಾರುಕಟ್ಟೆ ಸಂಘಗಳು ಸರ್ಕಾರದೊಂದಿಗೆ ಸಹಕರಿಸುವುದಾಗಿ ಸಿಟಿಐ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!