ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತಂಕ ಸೃಷ್ಟಿಸಿದ್ದ ಹ್ಯಾಂಬರ್ಗ್ ವಿಮಾನ ನಿಲ್ದಾಣ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗುತ್ತಿದೆ.
ಭಾನುವಾರ ಮಧ್ಯರಾತ್ರಿ ಎರಡು ಗಂಟೆಯಲ್ಲಿ ವ್ಯಕ್ತಿಯೊಬ್ಬ ಕಾರ್‌ನಲ್ಲಿ ಏರ್‌ಪೋರ್ಟ್ ಒಳ ನುಗ್ಗಿದ್ದು, ಗನ್‌ನಿಂದ ಶೂಟೌಟ್ ಮಾಡಿದ್ದಾನೆ. ಇಂಧನ ತುಂಬಿದ ಬಾಟಲಿಗಳಿಗೆ ಬೆಂಕಿ ಹಚ್ಚಿ ಎಸೆದಿದ್ದಾನೆ. ಇದರಿಂದಾಗಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಏರ್‌ಪೋರ್ಟ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
ಇಷ್ಟೆಲ್ಲಾ ಸಮಸ್ಯೆ ಸೃಷ್ಟಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ, ಆತನ ಜೊತೆಗೆ ಇದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಬಂಧಿಸುವಾಗ ಆರೋಪಿ ಯಾವ ರೀತಿ ವಿರೋಧವನ್ನೂ ತೋರದೆ ಸುಮ್ಮನಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಾರ್‌ನಲ್ಲಿ ಮಗು ಜೊತೆಗೆ ಆರೋಪಿ ಇದ್ದು, ಪೊಲೀಸರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದರು. ಆತ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ರೀತಿ ವರ್ತಿಸಿದ್ದಾನೆ, ಆತನ ಪತ್ನಿ ಮಗಳನ್ನು ಪತಿ ಕಿಡ್ನಾಪ್ ಮಾಡಿದ್ದಾನೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ 60 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ್ದು, ಮೂರು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಪರದಾಡಿದ್ದರು. ಇದೀಗ ವಿಮಾನ ನಿಲ್ದಾಣದ ಕಾರ್ಯ ಮರುಸ್ಥಾಪಿಸಲಾಗಿದ್ದು, ಆರೋಪಿ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.