ಕಟ್ಟರ್ ಇಸ್ಲಾಂವಾದಿಗಳೊಂದಿಗೆ ಸೇರಿಕೊಂಡು ವಿದೇಶಿ ವೇದಿಕೆಯಲ್ಲಿ ಭಾರತ ದೂಷಣೆಗೈದ ಹಮೀದ್ ಅನ್ಸಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತದ ಮಾಜಿ ಉಪರಾಷ್ಟ್ರಪತಿ, ಕಾಂಗ್ರೆಸ್ಸಿಗ ಹಮೀದ್ ಅನ್ಸಾರಿ ಅಮೆರಿಕದ ವೇದಿಕೆಯೊಂದರ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಭಾರತವನ್ನು ಟೀಕಿಸಿದ್ದಾರೆ. ಹಮೀದ್ ಅನ್ಸಾರಿ ಅವರ ಟೀಕೆಯ ಸಾರಾಂಶ ಇಷ್ಟು- “ಭಾರತದಲ್ಲಿ ಮಾನವ ಹಕ್ಕುಗಳ ದಮನವಾಗ್ತಿದೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣಗಳು ಹೆಚ್ಚುತ್ತಿವೆ ಹಾಗೂ ಉಗ್ರ ನಿಗ್ರಹ ಕಾಯ್ದೆಯನ್ನು ಕಾಶ್ಮೀರಿ ಹೋರಾಟಗಾರರನ್ನು ಹತ್ತಿಕ್ಕುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ.”

ಭಾರತವನ್ನು ಟೀಕಿಸಬಾರದು ಎಂದಿದೆಯೇ? ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಹಮೀದ್ ಅನ್ಸಾರಿಯವರಿಗೆ ಅನಿಸಿದ್ದರೆ ಅದನ್ನವರು ಸ್ವತಂತ್ರವಾಗಿ ಹೇಳುವುದಕ್ಕೆ ಏನಡ್ಡಿ ಎಂದು ಉದಾರವಾದಿಗಳು ಪ್ರಶ್ನಿಸಬಹುದೇನೋ.

ಆದರೆ, ಹಮೀದ್ ಅನ್ಸಾರಿ ಭಾಗವಹಿಸಿದ್ದು ಎಂಥವರು ಆಯೋಜಿಸಿದ್ದ ಸಭೆಯಲ್ಲಿ ಎಂಬುದನ್ನು ಗಮನಿಸಿದಾಗ ಅದರಲ್ಲಿರುವ ಭಾರತ ವಿರೋಧಿ ಕಾರ್ಯಸೂಚಿ ಮತ್ತು ಇಸ್ಲಾಂ ಕಟ್ಟರ್ ವಾದಿ ಅಂಶಗಳು ಮುನ್ನೆಲೆಗೆ ಬರುತ್ತವೆ.

ಗಣರಾಜ್ಯೋತ್ಸವದ ದಿನದಂತೆ ಅಮೆರಿಕದ ಸುಮಾರು 17 ಸಂಘಟನೆಗಳು ಸೇರಿ ಆಯೋಜಿಸಿದ್ದ ‘ಉಪನ್ಯಾಸಕೂಟ’ವಿದು. ಈ ಪೈಕಿ ಒಂದು ಸಂಘಟನೆ ಐಎಎಂಸಿ- ಇಂಡಿಯನ್-ಅಮೆರಿಕನ್ ಮುಸ್ಲಿಂ ಕೌನ್ಸಿಲ್.

ತ್ರಿಪುರಾ ಸರ್ಕಾರವು ಇತ್ತೀಚೆಗೆ ರಾಜ್ಯದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅಫಡವಿಟ್ ಒಂದರಲ್ಲಿ ಇದೇ ಐಎಎಂಸಿಯ ಕೈವಾಡವನ್ನೂ ಅದು ಪಾಕಿಸ್ತಾನದ ಐಎಸ್ಐ ಜತೆ ಹೊಂದಿರಬಹುದಾದ ಸಂಬಂಧವನ್ನೂ ಉಲ್ಲೇಖಿಸಲಾಗಿದೆ. ಐಎಎಂಸಿಯೇನೋ ಇವೆಲ್ಲ ವ್ಯರ್ಥಾರೋಪ ಎಂದಿದೆ. ಆದರೆ, ಭಾರತದ ಚುನಾಯಿತ ಸರ್ಕಾರವೊಂದು ಶಂಕಿಸಿರುವ ಸಂಘಟನೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತವನ್ನು ಟೀಕಿಸುವ ರೀತಿ ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದ ವ್ಯಕ್ತಿಗೆ ಥರವೇ ಎಂಬುದು ಈಗ ಸಾಮಾಜಿಕ ಮಾಧ್ಯಮದಲ್ಲಿ ಎದ್ದಿರುವ ಪ್ರಶ್ನೆ.

ಇಂಡಿಯನ್ ಅಮೆರಿಕನ್ ಮುಸ್ಲಿಂ ಗುಂಪಿನ ಕಟ್ಟರ್ ಚರಿತ್ರೆ

ದಶಕಗಳ ಹಿಂದೆ ಅಫಘಾನಿಸ್ತಾನದಲ್ಲಿ ತಾಲಿಬಾನ್ ಪತನವಾದಾಗ ದುಃಖಿಸಿದವರು, ಇತ್ತೀಚೆಗೆ ತಾಲಿಬಾನ್ ಮತ್ತೆ ಅಫಘಾನಿಸ್ತಾನದ ಚುಕ್ಕಾಣಿ ಹಿಡಿದಾಗ ಸಂಭ್ರಮಿಸಿದವರು ಈ ಸಮಿತಿಯವರು. ತಾಲಿಬಾನಿನ ಕ್ರೂರ ಅಟ್ಟಹಾಸವನ್ನು ಇಸ್ಲಾಮಿನ ಪುನರುತ್ಥಾನವೆಂಬಂತೆ ಸಂಭ್ರಮಿಸುವ ಈ ಸಮಿತಿಯ ಸದಸ್ಯರೇ, ಭಾರತಕ್ಕೆ ಮಾನವ ಹಕ್ಕುಗಳ ಪಾಲನೆ ವಿಚಾರದಲ್ಲಿ ಟೀಕೆ ಮಾಡುವುದು ಎಂಥ ಕ್ರೂರ ವ್ಯಂಗ್ಯವಲ್ಲವೇ ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಜನರು ಎತ್ತಿರುವ ಪ್ರಶ್ನೆ.

ಈ ಹಿಂದೆ ಐಎಎಂಸಿಯ ಸದಸ್ಯರ ಹಲವು ಸಾಮಾಜಿಕ ಜಾಲತಾಣದ ಪೋಸ್ಟುಗಳಲ್ಲಿ ಭಾರತ ದ್ವೇಷ ಢಾಳಾಗಿಯೇ ವ್ಯಕ್ತವಾಗಿತ್ತು. ಕೆಲವನ್ನು ಫೇಸ್ಬುಕ್ ಥರದ ವೇದಿಕೆಗಳು ನಿರ್ಬಂಧಿಸಿಯೂ ಇದ್ದವು. ಈ ಸಮಿತಿ ಈ ಹಿಂದೆ ಜಮಾತೆ ಇಸ್ಲಾಮಿ ಹಿಂದ್ ಥರದ ಸಂಘಟನೆಗಳಿಂದ ಬಂದವರಿಗೂ ವೇದಿಕೆ ಒದಗಿಸಿತ್ತು. ಹಾಗೆ ಮಾತನಾಡಲು ಬಂದ ಜಮಾತೆ ವಕ್ತಾರನೊಬ್ಬ ಭಾರತದ ಸುಪ್ರೀಂಕೋರ್ಟ್ ಸಲಿಂಗಕಾಮವನ್ನು ಸಮ್ಮತಗೊಳಿಸಿರುವುದು ಅತಿ ಹೇಸಿಗೆಯ ಕಾರ್ಯ ಎಂದಿದ್ದ.

ಭಾರತದಲ್ಲಿ ನಿಷೇಧಕ್ಕೊಳಗಾದ ಸಿಮಿ ಸಂಘಟನೆ ಜತೆ ತನಗೇನೂ ಸಂಬಂಧವಿಲ್ಲ ಎಂದು ಐಎಎಂಸಿ ಹೇಳುತ್ತದೆಯಾದರೂ ಸಿಮಿಯ ಸಂಸ್ಥಾಪಕನಿಗೇ ಅದು 2003ರಲ್ಲಿ ವೇದಿಕೆ ನೀಡಿತ್ತು. ಮೊಹಮ್ಮದ್ ಅಹಮದುಲ್ಲಾ ಸಿದ್ದಿಕಿ ಸಿಮಿ ಸ್ಥಾಪಕನಾಗಿದ್ದರೂ ಆ ಸಂಘಟನೆಯನ್ನು ಬಹಳ ಮೊದಲೇ ತೊರೆದು ತೀವ್ರವಾದದಿಂದ ದೂರ ಇದ್ದಾನೆ ಎಂದು ಆ ನಿಲುವನ್ನದು ಸಮರ್ಥಿಸಿಕೊಂಡಿತ್ತು.

ಇಂಥ ತೀವ್ರವಾದಿ ಘಮಲಿನ ಸಂಘಟನೆ ಆಯೋಜಿಸಿದ್ದ ವೇದಿಕೆಯಲ್ಲಿ ಭಾರತ ವಿರೋಧಿ ಭಾಷಣ ಮಾಡುವುದರ ಮೂಲಕ ಬೆತ್ತಲಾಗಿರುವುದು ಹಮೀದ್ ಅನ್ಸಾರಿಯೇ ಹೊರತು ದೇಶದ ಪ್ರತಿಷ್ಠೆಗೆ ಇದರಿಂದ ಏನೂ ಕುಂದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!