ಶೇಖ್ ಹಸೀನಾರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿ: ಭಾರತಕ್ಕೆ ಪ್ರತಿಪಕ್ಷ ಬಿಎನ್‌ಪಿ ಒತ್ತಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸ್ತುತ ದೆಹಲಿಯಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಒತ್ತಾಯಿಸಿದೆ.

ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ 2013ರಲ್ಲಿ ಸಾಮೂಹಿಕ ಹತ್ಯೆ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.

‘ನೀವು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಕಾನೂನು ರೀತಿಯಲ್ಲಿ ಹಸ್ತಾಂತರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ದೇಶದ ಜನರು ಅವರ ವಿಚಾರಣೆಗೆ ಕಾದಿದ್ದಾರೆ. ಆಕೆ ಆ ವಿಚಾರಣೆಯನ್ನು ಎದುರಿಸಲಿ’ಎಂದು BNP ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಹೇಳಿದ್ದಾರೆ.

ಶೇಖ್ ಹಸೀನಾಗೆ ಆಶ್ರಯ ನೀಡುವ ಮೂಲಕ ಭಾರತವು ಪ್ರಜಾಪ್ರಭುತ್ವದ ಬಗ್ಗೆ ತನ್ನ ಬದ್ಧತೆಯನ್ನು ತೋರುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಭಾರತದಲ್ಲಿಯೇ ಉಳಿದುಕೊಂಡು ಬಾಂಗ್ಲಾದೇಶದಲ್ಲಿ ಸಂಭವಿಸಿದ ಕ್ರಾಂತಿಯನ್ನು ತಡೆಯಲು ಶೇಖ್ ಹಸೀನಾ ನಾನಾ ಕುತಂತ್ರಗಳನ್ನು ಆರಂಭಿಸಿದ್ದಾರೆ ಎಂದು ಮಿರ್ಜಾ ಫಕ್ರುಲ್ ಆರೋಪಿಸಿದ್ದಾರೆ.

ಜುಲೈ ಮಧ್ಯದಲ್ಲಿ ಸರ್ಕಾರಿ ಉದ್ಯೋಗಗಳ ವಿವಾದಾತ್ಮಕ ಕೋಟಾ ಪದ್ಧತಿಯ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಬಾಂಗ್ಲಾದೇಶದಲ್ಲಿ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಹಿಂಸಾತ್ಮಕ ಸರ್ಕಾರಿ ವಿರೋಧಿ ಆಂದೋಲನಕ್ಕೆ ವೇಗವನ್ನು ನೀಡಿತು.

ಕಳೆದ ವಾರ, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ತನ್ನ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಸಾಮೂಹಿಕ ಚಳವಳಿಯ ಸಂದರ್ಭದಲ್ಲಿ ಜುಲೈ 15ರಿಂದ ಆಗಸ್ಟ್ 5ರವರೆಗೆ ನಡೆದ ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 9 ಜನರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!