ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜ್ಮೀರ್ ಲೈಂಗಿಕ ಹಗರಣದಲ್ಲಿ 100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ ಪೋಕ್ಸೊ ನ್ಯಾಯಾಲಯವು 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ನ್ಯಾಯಾಲಯವು ಆರೋಪಿಗಳಿಗೆ ತಲಾ ₹ 5 ಲಕ್ಷ ದಂಡ ವಿಧಿಸಿದೆ.
1992ರಲ್ಲಿ ಬೆಳಕಿಗೆ ಬಂದ ಅಜ್ಮೀರ್ ಲೈಂಗಿಕ ಹಗರಣದ ಆರೋಪಿಗಳಾದ ನಫೀಸ್ ಚಿಶ್ತಿ, ನಸೀಮ್ ಅಲಿಯಾಸ್ ಟಾರ್ಜನ್, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸೊಹೈಲ್ ಗನಿ ಮತ್ತು ಸೈಯದ್ ಜಮೀರ್ ಹುಸೇನ್ ಎಂಬವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ವಕೀಲ ವೀರೇಂದ್ರ ಸಿಂಗ್ ಹೇಳಿದ್ದಾರೆ.
11 ರಿಂದ 20 ವರ್ಷದೊಳಗಿನ ಕಾಲೇಜು ಮತ್ತು ಶಾಲೆಗೆ ಹೋಗುವ ಹುಡುಗಿಯರಲ್ಲಿ ಗ್ಯಾಂಗ್‌ನ ಸದಸ್ಯರು ಸ್ನೇಹ ಬೆಳೆಸಿ, ದೈಹಿಕವಾಗಿ ಸಂಪರ್ಕವೇರ್ಪಟ್ಟ ಸಂದರ್ಭಗಳಲ್ಲಿ ಅವರ ಫೋಟೊ ತೆಗೆದಿದ್ದು, ನಂತರ ಅವರ ಮೇಲೆ ಅತ್ಯಾಚಾರವೆಸಗಿದ್ದರು.
ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದರು. 12 ಮಂದಿ ವಿರುದ್ಧ ಪ್ರಕರಣದ ಮೊದಲ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು.
ಆರೋಪಿಗಳ ಪೈಕಿ, ನಸೀಮ್ ಅಲಿಯಾಸ್ ಟಾರ್ಜನ್ 1994 ರಲ್ಲಿ ತಲೆಮರೆಸಿಕೊಂಡಿದ್ದ. ಜಹೂರ್ ಚಿಶ್ತಿ ಸೆಕ್ಷನ್ 377 (ಅಸ್ವಾಭಾವಿಕ ಸೆಕ್ಸ್) ಅಡಿಯಲ್ಲಿ ತಪ್ಪಿತಸ್ಥ ಎಂದು ಸಾಬೀತಾಯಿತು.ಆತನ ಪ್ರಕರಣವನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಸ್ಕಿಜೋಫ್ರೇನಿಯಾ ರೋಗನಿರ್ಣಯ ಮಾಡಿದ ನಂತರ ಫಾರೂಕ್ ಚಿಶ್ತಿ ವಿಚಾರಣೆ ಪ್ರತ್ಯೇಕವಾಗಿ ಮುಂದುವರೆದಿದ್ದು 2007 ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆರೋಪಿಗಳ ಪೈಕಿ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತರ ಎಂಟು ಆರೋಪಿಗಳಿಗೆ 1998 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ನಫೀಸ್ ಚಿಶ್ತಿ, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸೊಹೈಲ್ ಗನಿ, ಸೈಯದ್ ಜಮೀರ್ ಹುಸೇನ್ ಮತ್ತು ಅಲ್ಮಾಸ್ ವಿರುದ್ಧ ಎರಡನೇ ಚಾರ್ಜ್ ಶೀಟ್ ಸಲ್ಲಿಸಲಾಯಿತು.
ಮೊದಲ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಮತ್ತು ತಲೆಮರೆಸಿಕೊಂಡಿದ್ದ ನಫೀಸ್ ಚಿಶ್ತಿ, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸೊಹೈಲ್ ಗನಿ, ಸೈಯದ್ ಜಮೀರ್ ಹುಸೇನ್ ಮತ್ತು ನಸೀಮ್ ಅಲಿಯಾಸ್ ಟಾರ್ಜನ್ ಸೇರಿದಂತೆ ಉಳಿದ ಆರು ಆರೋಪಿಗಳಿಗೆ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.