ಹೊಸದಿಗಂತ ವರದಿ, ಮಡಿಕೇರಿ:
ಠಾಣೆಯ ಮುಂದೆಯೇ ಜಗಳವಾಡಿ ಕೈಕೈ ಮಿಲಾಯಿಸಿಕೊಂಡ 11ಮಂದಿಯ ವಿರುದ್ಧ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಾಪೋಕ್ಲು ಸಮೀಪದ ಬೇತು ಗ್ರಾಮದ ಕೆಲವರ ನಡುವೆ ವ್ಯಾಜ್ಯವಿದ್ದು, ಅದೇ ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡವರು ದೂರು ನೀಡಲೆಂದು ನಾಪೋಕ್ಲು ಠಾಣೆಗೆ ಆಗಮಿಸಿದ್ದರೆನ್ನಲಾಗಿದೆ.
ಈ ಸಂದರ್ಭ ಠಾಣೆಯ ಮುಂಭಾಗದಲ್ಲಿ ಕೂಡಾ 11 ಜನರು ಒಬ್ಬರಿಗೊಬ್ಬರು ಜಗಳ ಮಾಡುವುದರೊಂದಿಗೆ, ಜೋರಾಗಿ ಕಿರುಚಾಡಿಕೊಂಡು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡ ಹಿನ್ನೆಲೆಯಲ್ಲಿ ಬೇತು ಗ್ರಾಮದ ಕೆ.ಹೆಚ್ ಅಹಮ್ಮದ್ (51), ಹಮೀದ್( 45 ), ಹಂಸ (60) ಸುಧೂರ (40) ಹಸೀನಾ (40), ಸಫೀಯಾ (45), ನಬೀಸಾ (41), ಆಸೀಯಾ (35), ನಾಪೋಕ್ಲುವಿನ ಇಸ್ಮಾಯಿಲ್ (49), ಮಹಮ್ಮದ್ ಅಲಿ (28), ಆಟೋ ಲತೀಫ್ (42) ಎಂಬವರ ವಿರುದ್ಧ ನಾಪೋಕ್ಲು ಪೊಲೀಸರು ಬಿಎನ್ ಎಸ್ ಆಕ್ಟ್ ಕಲಂ: 194(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗವೆಸಗುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಮತ್ತು ಈ ರೀತಿಯ ಕೃತ್ಯಗಳು ಪುನರಾವರ್ತನೆಗೊಂಡಲ್ಲಿ ಅಂತಹ ವ್ಯಕ್ತಿಗಳ ಮೇಲೆ ರೌಡಿ ಶೀಟರ್ ತೆರೆದು ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವ ವ್ಯಕ್ತಿಗಳ ಅಥವಾ ಘಟನೆಗಳು ನಡೆಯುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ