ಆಜಾನ್ ಚಾಲ್ತಿಯಲ್ಲಿದ್ದಾಗ ಹನುಮಾನ್ ಚಾಲೀಸಾ ಪಠಣ ಕೂಡದು!- ಮಹಾರಾಷ್ಟ್ರ ಶಿವಸೇನಾ ಆಡಳಿತದ ತುಷ್ಟೀಕರಣ ನಡೆ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್‌
“ಹನುಮಾನ್ ಚಾಲೀಸಾ ಪಠಣವಾಗುತ್ತಿದ್ದರೆ ಅದಕ್ಕೆ 15 ನಿಮಿಷ ಮೊದಲು ಮತ್ತು ನಂತರ ಯಾರೂ ಧ್ವನಿವರ್ಧಕದಲ್ಲಿ ಆಜಾನ್ ಕರೆಯುವಂತಿಲ್ಲ..” ಹೀಗೇನಾದರೂ ಭಾರತದಲ್ಲಿ ಯಾವುದೇ ಸರ್ಕಾರ ಆದೇಶ ಹೊರಡಿಸಿದ್ದರೆ ಸಮಸ್ತ ‘ಸೆಕ್ಯುಲರ್’ ಗಣ ಎದ್ದು ಕೂರುತ್ತಿತ್ತಲ್ಲವೇ? ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹೀಗೆ ಎಲ್ಲ ಥರದ ಬೊಬ್ಬೆಗಳೂ ಶುರುವಾಗುತ್ತಿದ್ದವೇನೋ.
ಆದರೆ, ಇದೇ ಬಗೆಯ ಆದೇಶವೊಂದನ್ನು ಮುಸ್ಲಿಮರ ಪರವಾಗಿ, ಅವರ ತುಷ್ಟೀಕರಣಕ್ಕೆ ಮಹಾರಾಷ್ಟ್ರ ಆಡಳಿತ ಹೊರಡಿಸಿದೆ. ಅದನ್ನು ಕಾನೂನು ಪಾಲನೆ ಹೆಸರಲ್ಲಿ ಸಮರ್ಥನೆ ಮಾಡಿಕೊಂಡಿದೆ.
ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ರಾಜ್ಯದ ಡಿಸಿಪಿ ಅವರೊಂದಿಗೆ ಸಂವಾದ ನಡೆಸಿದ ಬಳಿಕ ಆದೇಶವೊಂದನ್ನು ಪ್ರಕಟಿಸಿದ್ದು, ರಾಜ್ಯ ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡುವಂತೆ ಸೂಚನೆ ನೀಡಿದ್ದಾರೆ.
ಆ ಆದೇಶ ಹೀಗಿದೆ. 1. ಹಿಂದೂಗಳು ಹನುಮಾನ್ ಚಾಲೀಸಾ ಅಥವಾ ಭಜನೆ ನುಡಿಸಲು ಸೂಕ್ತ ಅನುಮತಿ ಪಡೆದುಕೊಳ್ಳಬೇಕು. 2. ಮಸೀದಿಗಳಲ್ಲಿ ಅಜಾನ್‌ ಮೊಳಗುವ ಮೊದಲು ಮತ್ತು ಅಜಾನ್‌ ಮೊಳಗಿಸಿದ ನಂತರದ 15 ನಿಮಿಷಗಳಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಿಸಲು ಅನುಮತಿಯಿಲ್ಲ. 3.ಮಸೀದಿಯಿಂದ 100 ಮೀಟರ್ ವ್ಯಾಪ್ತಿಯ ಒಳಗೆ ಹಿಂದೂಗಳು ಭಜನೆ ಮಾಡಲು ಅನುಮತಿ ನೀಡುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಆದೇಶದ ಹಿಂದಿರುವ ಉದ್ದೇಶ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಜೋರಾಗಿ ಪ್ರಾರ್ಥನೆ ಸಲ್ಲಿಸುವ ಬಗ್ಗೆ ಕೆಲದಿನಗಳ ಹಿಂದೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಪ್ರಬಲವಾಗಿ ಧ್ವನಿ ಎತ್ತಿದ್ದರು. ಇದು ರಾಜ್‌ ಠಾಕ್ರೆ ಹಾಗೂ ಆಡಳಿತರೂಢ ಶಿವಸೇನೆ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ, “ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಹೇಗೆ ಜೋರಾಗಿ ಹಾಕುತ್ತಾರೆ? ಇದನ್ನು ನಿಲ್ಲಿಸದಿದ್ದರೆ ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ಅಳವಡಿಸಿ ಜೋರಾಗಿ ಹನುಮಾನ್ ಚಾಲೀಸಾ ನುಡಿಸಲು ಪ್ರಾರಂಭಿಸುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಮೇ 3ರ ಒಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದಿದ್ದರು.
ಮಹಾರಾಷ್ಟ್ರ ಸರ್ಕಾರ ರಾಜ್‌ ಠಾಕ್ರೆಗೆ ತಿರುಗೇಟು ನೀಡುವ ಬರದಲ್ಲಿ ಇದೀಗ ಹಿಂದೂ ಧರ್ಮೀಯರ ಭಾವನೆಗಳಿಗೆ ಘಾಸಿಯಾಗುವಂತಹ ಆದೇಶವನ್ನು ಹೊರಡಿಸಿದೆ. ದೇವಾಲಯದಿಂದ ನಿರ್ದಿಷ್ಟ ದೂರದೊಳಗೆ ಆಜಾನ್ ಪಠಿಸಬಾರದು ಎಂದೇನಾದರೂ ಇವರು ನಿಯಮ ಹಾಕುವ ಧೈರ್ಯ ತೋರಿದ್ದಾರೆಯೇ? ಮುಸ್ಲಿಮರಿಗಿಲ್ಲದ ಕಾನೂನುಪಾಲನೆ ಹಿಂದುಗಳಿಗೇಕೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದಿಂದ ಧ್ವನಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!