ಹನುಮಂತನಿಗೆ ಬಂತು ಕಿಚ್ಚ ಸುದೀಪನ ಗಿಫ್ಟ್: ಲೋ ತಮ್ಮ ದಿನವೂ ಜಳಕ ಮಾಡೋ ಎಂದ ಬಾದ್‌ ಷಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಸೀಸನ್‌ 11ರಲ್ಲಿ ತಮ್ಮ ಮುಗ್ಧತೆಯಿಂದ ಜನರ ಮನಸ್ಸನ್ನು ಗೆದ್ದಿರುವ ಹನುಮಂತ ಇದೀಗ ಸುದೀಪ್ ಮನಸ್ಸನ್ನು ಕೂಡ ಗೆದ್ದಿದ್ದಾರೆ.

ಹನುಮಂತನ ಮಾತಿಗೆ ಮನಸೋತಿರುವ ಕಿಚ್ಚ ಸುದೀಪ್ ಅವರು ಕಳೆದ ವಾರ ಒಂದು ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿಗೆ ತಕ್ಕಂತೆ ಕಿಚ್ಚ ಸುದೀಪ್ ಈಗ ಹನುಮಂತನಿಗೆ ಭರ್ಜರಿ ಉಡುಗೊರೆಯನ್ನ ಕಳುಹಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಹನುಮಂತುಗೆ ಕಿಚ್ಚ ಸುದೀಪ್ ಅವರು ಸ್ಪೆಷಲ್ ಗಿಫ್ಟ್‌ಗಳನ್ನ ಕಳುಹಿಸಿದ್ದಾರೆ. ಬ್ರಾಂಡೆಂಡ್‌ ಬಟ್ಟೆಗಳು, ಹೊಸ ಚೆಡ್ಡಿ, ಲುಂಗಿಯನ್ನು ಹನುಮಂತುಗೆ ಕಳುಹಿಸಲಾಗಿದೆ. ಮನೆಯ ಸದಸ್ಯರು ಹನುಮಂತನಿಗೆ ಕಿಚ್ಚ ಸುದೀಪ್ ಗಿಫ್ಟ್ ಹಸ್ತಾಂತರಿಸಿದ್ದಾರೆ.

ಕಿಚ್ಚ ಸುದೀಪ್ ಉಡುಗೊರೆಗೆ ಭಾವುಕರಾದ ಹನುಮಂತ ಅವರು ನನಗೆ ಇದನ್ನ ನಂಬೋದಕ್ಕೆ ಆಗುತ್ತಿಲ್ಲ. ಅಷ್ಟೊಂದು ಖುಷಿ ಆಗುತ್ತಾ ಇದೆ. ಥ್ಯಾಂಕ್ಯು ಸಾರ್ ಧನ್ಯವಾದಗಳು ಎಂದು ಹೇಳಿದ್ದಾರೆ.

ಹನುಮಂತನಿಗಾಗಿ ಸುದೀಪ್ ಅವರು ಹೊಸ ಶರ್ಟ್‌, ಹೊಸ ಬಟ್ಟೆಗಳ ಜೊತೆಗೆ ಚೆಡ್ಡಿಯನ್ನು ಕಳುಹಿಸಿದ್ದಾರೆ. ಚೆಡ್ಡಿಯನ್ನು ನೋಡಿದ ಹನುಮಂತು, ಮಾವೋ 3 ಸಾವಿರ ಚೆಡ್ಡಿ ಅಂತ ಹೇಳಿ ಎಲ್ಲರೂ ನಕ್ಕು, ನಕ್ಕು ಸುಸ್ತಾಗುವಂತೆ ಮಾಡಿದ್ದಾರೆ.

ಬಟ್ಟೆಯ ಜೊತೆಗೆ ಕಿಚ್ಚ ಸುದೀಪ್ ಅವರು ಹನುಮಂತನಿಗಾಗಿ ಒಂದು ಕವನವನ್ನು ಬರೆದು ಕಳುಹಿಸಿದ್ದಾರೆ.

ಕಿಚ್ಚನಿಂದ ಹನುಮಂತನ ಗುಣಗಾನ
ಮೈಯ ಮುಚ್ಚೋ ಬಟ್ಟೆ ನೋಡಿ ಮಾನವ ಅಳೆಯಬ್ಯಾಡ್ರಿ
ಮನಸ ತೋರೋ ನಗುವ ನೋಡದೆ ಸುಮ್ನೆ ಇರಬ್ಯಾಡ್ರಿ
ಕುರಿಯ ಕಾಯೋ ಕುರಿಗಾಹಿ ಕೊಡುತಾನೋ ಕಂಬಳಿ
ಜಗವ ಕಾಯೋ ರೈತ ಸ್ನೇಹಿ ನೀಡುತಾನೋ ಅಂಬಲಿ
ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ
ದಿನ ದಿನವೂ ಪದವ ಗಟ್ಟಿ ಹೊಸ ಹಾಡ ಹಾಡೋ
ಇಂತಿ ನಿಮ್ಮ ಬಾದ್‌ ಷಾ ಕಿಚ್ಚ

ಮಾತು ಕೊಟ್ಟಂತೆ ನಡೆದ ಮಾಣಿಕ್ಯ
ಕಳೆದ ವಾರ ಕಿಚ್ಚ ಸುದೀಪ್ ಅವರು ಹನುಮಂತ ನೀನು ಪ್ರತಿದಿನ ಯಾಕೆ ಸ್ನಾನ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಹನುಮಂತ ನನ್ನ ಬಳಿ 4-5 ಬಟ್ಟೆಗಳು ಅಷ್ಟೇ ಇದೆ. ಪ್ರತಿದಿನ ಸ್ನಾನ ಮಾಡಿದ್ರೆ ಪದೇ ಪದೇ ಬಟ್ಟೆ ಹೊಗೆಯಬೇಕು ಎಂದು ಉತ್ತರಿಸಿದ್ದ. ಈ ಮಾತು ಕೇಳಿದ ಕಿಚ್ಚ ಸುದೀಪ್ ಅವರು ಹನುಮಂತು ನಿಮ್ಮ ಬಟ್ಟೆಯ ಅಳತೆ ನಮಗೆ ಕೊಡಿ. ನಮ್ಮ ಡಿಸೈನರ್‌ಗೆ ಹೇಳಿ ನಿಮಗೆ ಬಟ್ಟೆ ಕಳುಹಿಸುತ್ತೇವೆ ಅನ್ನೋ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಕಿಚ್ಚ ಸುದೀಪ್ ಅವರು ಹನುಮಂತನಿಗಾಗಿ ಹೊಸ ಬಟ್ಟೆಗಳ ಉಡುಗೊರೆ ಕಳುಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!