August 19, 2026
Wednesday, August 19, 2026
spot_img

ಹನೂರು ಎನ್‌ಕೌಂಟರ್‌ ಕೇಸ್‌ : ಅರಣ್ಯಾಧಿಕಾರಿಗಳೇ ಮೊದಲು ಗುಂಡು ಹಾರಿಸಿದ್ದು ಎಂದ ನಾಲ್ಕನೇ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರದ ಹನೂರು ವಲಯದ ಕಾಡಿನಲ್ಲಿ ಆಗಸ್ಟ್‌ 15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೀಗ ನಾಲ್ಕನೇ ವ್ಯಕ್ತಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಮೊದಲು ಅರಣ್ಯಾಧಿಕಾರಿಗಳೇ ದಾಳಿ ನಡೆಸಿದ್ದು ಎಂದು ಹೇಳಿದ್ದಾರೆ.

ಗುಂಡಿನ ಚಕಮಕಿ ವೇಳೆ ಮೂವರು ಮೃತಪಟ್ಟಿದ್ದಾರೆ. ಬದುಕುಳಿದ ನಾಲ್ಕನೇ ವ್ಯಕ್ತಿ ಮಹಿಮಾ ದಾಸ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ನಂತರ ಇವರು ಗಾಯಬ್‌ ಆಗಿದ್ದು, ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ನನಗೆ ಬೆದರಿಕೆ ಹಾಕಲಾಗಿದೆ. ಜೀವ ಭಯವಿದೆ, ನನಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?

ನಾವು ನಾಲ್ವರು ಬೆಟ್ಟದಿಂದ ಇಳಿದು ಬರುತ್ತಿದ್ದೆವು. ಈ ವೇಳೆ ಇದ್ದಕ್ಕಿದ್ದಂತೆಯೇ ಅರಣ್ಯಾಧಿಕಾರಿಗಳು ಗುಂಡು ಹಾರಿಸಲು ಆರಂಭಿಸಿದರು. ಮೂವರು ಸತ್ತುಹೋದರು. ನಾನು ಬೆಳಗಿನ ಜಾವ ಐದುವರೆಗೆ ಬೆಟ್ಟ ಇಳಿದೆ. ಆಗ ಸಿಬ್ಬಂದಿ ಗುಂಡು ಹಾರಿಸಿದರು. ಆದರೆ ನನಗೆ ಗಾಯಗಳಾದವು. ಮನೆಗೆ ಓಡಿಹೋದೆ. ಅಸ್ವಸ್ಥನಾಗಿದ್ದ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ ಹೇಳಿದ್ದೇನು?

ಬೇಟೆಗಾರರು ಮೊದಲು ನಮ್ಮ ಮೇಲೆ ಗುಂಡು ಹಾರಿಸಿದರು. ಆತ್ಮರಕ್ಷಣೆಗಾಗಿ ನಾವು ಗುಂಡು ಹಾರಿಸಬೇಕಾಯ್ತು ಎಂದು ಅರಣ್ಯ ಇಲಾಖೆ ಹೇಳಿತ್ತು. ಮೃತ ಪೀಟರ್, ಆಂಥೋನಿ ಹಾಗೂ ಕುಮಾರ್ ಅವರ ಅಂತ್ಯಕ್ರಿಯೆ ನೇರವೇರಿದ ಬಳಿಕ ಅರಣ್ಯ ಇಲಾಖೆ ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ತನಿಖಾಧಿಕಾರಿಗಳಿ ಒಪ್ಪಿಸಿತ್ತು. ಆದರೆ ಇದೀಗ ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಸಾಕ್ಷ್ಯಗಳ ಮೇಲೆ ಅನುಮಾನ ಹುಟ್ಟಿಕೊಂಡಿದೆ. ಘಟನಾ ಸ್ಥಳದಲ್ಲಿ ಬೇಟೆಗಾರರಿಂದ ಅಕ್ರಮವಾಗಿ ಬಳಸಲಾಗುತ್ತಿದ್ದ ಬಂದೂಕು ಹಾಗೂ ಬರೋಬ್ಬರಿ 34.25 ಕೆಜಿ ಜಿಂಕೆ ಮಾಂಸ ತುಂಬಿದ್ದ ಚೀಲ ಹಾಗೂ ಜಿಂಕೆಗೆ ಮೂರು ಕಡೆಗಳಲ್ಲಿ ಬಿದ್ದಿದ್ದ ಗುಂಡೇಟಿನ ಪುರಾವೆಯನ್ನು ಅರಣ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಅಲ್ಲದೆ 4 ಜೊತೆ ಪ್ಯಾರಾಗನ್ ಚಪ್ಪಲಿ, 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು ಸೇರಿದಂತೆ ಇನ್ನೂ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಹೊಸ ಚಪ್ಪಲಿಯ ಫೋಟೊ ಕೂಡ ಇದ್ದು, ಚಪ್ಪಲಿಯ ಸ್ಟಿಕ್ಕರ್‌ ಕೂಡ ತೆಗೆದಿರಲಿಲ್ಲ. ಇದೆಲ್ಲವೂ ನೂರಾರು ಅನುಮಾನಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !