ಹೊಸದಿಗಂತ ಡಿಜಿಟಲ್ ಡೆಸ್ಕ್:
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಉಪರಾಷ್ಟ್ರಪತಿ ಜಗದೀಪ್ ಧನಕರ್ ಚಾಲನೆ ನೀಡಿದರು. ರ್ಯಾಲಿಯಲ್ಲಿ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ , ಅನುರಾಗ್ ಠಾಕೂರ್ , ಶೋಭಾ ಕರಂದ್ಲಾಜೆ, ಪಿಯೂಷ್ ಗೋಯಲ್ ಮತ್ತಿತರರು ಭಾಗವಹಿಸಿದ್ದರು.
75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವರ್ಷ ಪ್ರಧಾನಿ ಮೋದಿ ಅವರು ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಿದರು. ಇದರ ನೆನಪಿಗಾಗಿ ಸಂಸದರು ಮತ್ತು ಸಚಿವರುಗಳು ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೈಕ್ ರ್ಯಾಲಿಯನ್ನು ನಡೆಸುವ ಮೂಲಕ ಹರ್ ಘರ್ ತಿರಂಗ ಅಭಿಯಾನಕ್ಕೆ ಮತ್ತೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾನತಾಡಿ, ಆಗಸ್ಟ್ 15 ಮತ್ತು ಜನವರಿ 26 ರಂದು ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಬೇಕು. ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಈ ವರ್ಷ ಆಗಸ್ಟ್ 15 ವಿಶೇಷವಾಗಿದೆ ಏಕೆಂದರೆ ಇದು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಮುಕ್ತಾಯವನ್ನು ಸೂಚಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು, ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಸಮಾರೋಪವನ್ನು ಗುರುತಿಸಲು ಜನರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಈ ರ್ಯಾಲಿಯಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಿದ್ದರು. ಪ್ರಗತಿ ಮೈದಾನದಲ್ಲಿ ಆರಂಭವಾದ ಬೈಕ್ ರ‍್ಯಾಲಿ ಇಂಡಿಯಾ ಗೇಟ್ ವೃತ್ತ ತಲುಪಿ ಅಲ್ಲಿಂದ ಇಂಡಿಯಾ ಗೇಟ್ ಕಾಂಪ್ಲೆಕ್ಸ್ ವೃತ್ತಕ್ಕೆ ತೆರಳಿ ಬಳಿಕ ಕರ್ತವ್ಯ ಪಥವನ್ನು ದಾಟಿತು. ಬಳಿಕ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ರ್ಯಾಲಿ ಕೊನೆಗೊಂಡಿತು.