‘ಹರ್ ಘರ್ ತಿರಂಗಾ ಕಾರ್ಯಕ್ರಮ’: ರಾಜ್ಯದಲ್ಲಿ ಹಾರಾಡಲಿದೆ ಕೋಟಿ ರಾಷ್ಟ್ರ ಧ್ವಜ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

75ನೇ ಸ್ವಾತಂತ್ರ್ಯೋವದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ‘ಹರ್ ಘರ್ ತಿರಂಗಾ ಕಾರ್ಯಕ್ರಮ’ವನ್ನು ರಾಜ್ಯ ಸರಕಾರ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಒಂದು ಕೋಟಿ ರಾಷ್ಟ್ರ ಧ್ವಜವನ್ನು ಹಾರಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹಾಗೂ ಕೇಂದ್ರ ಸಂಸ್ಕೃತಿ ಸಚಿವರಿಂದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ “ಹರ್ ಘರ್ ತಿರಂಗಾ” ಕುರಿತು ಇಂದು ನಗರದ ಶಾಂಘ್ರೀಲಾ ಹೋಟೆಲ್‌ನಲ್ಲಿ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ, ಸರ್ಕಾರೇತರ, ಶಾಲಾ-ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ಅವರ ಅಡಿಯಲ್ಲಿ ಉನ್ನತ ಮಟ್ಟದ ಸಮಿತಿ ರೂಪಿಸಲಾಗಿದ್ದು, ಈಗಾಗಲೇ ಕಾರ್ಯಕ್ರಮ ಅನುಷ್ಠಾನಕ್ಕೆ ಸಭೆಗಳು ನಡೆಯುತ್ತಿವೆ ಎಂದರು.

ಶೇ.60 ರಷ್ಟು ಗ್ರಾಮೀಣ ಪ್ರದೇಶ ಹಾಗೂ ಶೇ.40 ರಷ್ಟು ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ನಗರ ಪ್ರದೇಶಗಳ ಮನೆಗಳು, ಸರ್ಕಾರಿ ಕಚೇರಿ, ಶಾಲಾ-ಕಾಲೇಜಿಗಳಲ್ಲಿ ಧ್ವಜ ಹಾರಿಸುವ ಮೂಲಕ ಒಟ್ಟು ಒಂದು ಕೋಟಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸಲು ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಧ್ವಜ ತಯಾರಿಸಿ, ದೇಶಾದ್ಯಂತ ಪೂರೈಸುತ್ತಿರುವ ಧಾರವಾಡದ ಬಳಿಯಿರುವ ರಾಷ್ಟ್ರ ಧ್ವಜ ಉತ್ಪಾದಕ ಸಂಸ್ಥೆ, ಸ್ವಸಹಾಯ ಸಂಘಗಳ ಮೂಲಕ 50 ಲಕ್ಷದಷ್ಟು ಧ್ವಜಗಳನ್ನು ಉತ್ಪಾದಿಸಲಿದ್ದೇವೆ.5 ಲಕ್ಷ ತ್ರಿವರ್ಣ ಧ್ವಜಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಇಂಡೆಂಟ್ ನೀಡಲಾಗಿದ್ದು, ಉಳಿದ 45 ಲಕ್ಷ ತ್ರಿವರ್ಣ ಧ್ವಜಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಇಂಡೆಂಟ್ ನೀಡಲಾಗುವುದು ಎಂದು ತಿಳಿಸಿದರು.
ರಾಷ್ಟ್ರಧ್ವಜ ಎಂಬುದು ನಮ್ಮ ಭಾವನಾತ್ಮಕ ಸೆಲೆಯಾಗಿರುವುದರಿಂದ “ಹರ್ ಘರ್ ತಿರಂಗಾ” ಕಾರ್ಯಕ್ರಮ ರೂಪಿಸುವ ಮೂಲಕ ದೇಶದಲ್ಲಿ ಏಕತೆಯನ್ನು ಸಾರುತ್ತಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೇ ಸುತ್ತೋಲೆಗಳನ್ನು ನೀಡಲಾಗಿದ್ದು, ಎಲ್ಲಾ ಶಾಲಾ, ಕಾಲೇಜು, ಅಂಗನವಾಡಿಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಕುರಿತು ಎಲ್ಲಾ ಹಂತದಲ್ಲೂ ಅಗತ್ಯ ಮತ್ತು ವ್ಯಾಪಕ‌ ಪ್ರಚಾರ ನೀಡುವಂತೆ ತಿಳಿಸಿದರು. ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ದೇಶಾದ್ಯಂತ 20 ಕೋಟಿ ರಾಷ್ಟ್ರ ಧ್ವಜಗಳನ್ನು ಹಾರಿಸಲು ಕ್ರಮವಹಿಸಬೇಕು. ಈ ಕಾರ್ಯಕ್ರಮ ಯಶಸ್ವಿ ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಾತ್ರವಲ್ಲದೆ, ಜನತೆಯ ಸಹಭಾಗಿತ್ವವು ಪ್ರಮುಖವಾಗಿರುವುದರಿಂದ 100 ಕೋಟಿ ಜನತೆಯನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತೇಜಿಸಬೇಕು ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!