ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ಸಂಸತ್ತು ಹೌಸ್ ಆಫ್ ಕಾಮನ್‌ನಲ್ಲಿ ಹತ್ಯೆಯಾದ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದೆ.
ಈ ನಡೆಯಿಂದ ಕೆನಡಾ ವಿರುದ್ಧ ಭಾರತ ಕೆಂಡಾಮಂಡಲವಾಗಿದೆ. ಈ ಬಗ್ಗೆ ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸವು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಏರ್ ಇಂಡಿಯಾ ವಿಮಾನ 182 (ಕಾನಿಷ್ಕಾ) ಮೇಲೆ ನಡೆದ ಬಾಂಬ್ ದಾಳಿಯನ್ನು ಜಗತ್ತಿಗೆ ನೆನಪಿಸಿದೆ.
ಕೆನಡಾ ಹರ್ದೀಪ್ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಯಾಗಿ ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ 1985ರಲ್ಲಿ ಏರ್ ಇಂಡಿಯಾ ಕಾನಿಷ್ಕಾ ವಿಮಾನದ ಮೇಲೆ ಖಲಿಸ್ತಾನಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ 329 ಜನರನ್ನು ಸ್ಮರಿಸಲು ತೀರ್ಮಾನಿಸಿದೆ. ಭಾನುವಾರ ಸಂಜೆ 6:30ಕ್ಕೆ ಸ್ಟಾನ್ಲಿ ಪಾರ್ಕ್ನ ಸೆಪರ್ಲಿ ಆಟದ ಮೈದಾನದಲ್ಲಿ ಮೌನಾಚರಣೆ ನಡೆಸಲು ಭಾರತ ತೀರ್ಮಾನಿಸಿದೆ.
ಭಯೋತ್ಪಾದನೆಯ ಪಿಡುಗನ್ನು ಎದುರಿಸುವಲ್ಲಿ ಭಾರತವು ಮುಂಚೂಣಿಯಲ್ಲಿ ನಿಂತಿದೆ. ಜಾಗತಿಕವಾಗಿ ಉಗ್ರಗಾಮಿಗಳ ಬೆದರಿಕೆಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಬುಧವಾರ ತಿಳಿಸಿದೆ.
ಜೂನ್ 23, 2024 ಏರ್ ಇಂಡಿಯಾ ವಿಮಾನ 182ರ (ಕನಿಷ್ಕಾ) ಮೇಲೆ ಭಯೋತ್ಪಾದಕ ಬಾಂಬ್ ದಾಳಿ ನಡೆದು 39 ವರ್ಷಗಳಾಗುತ್ತವೆ. ಈ ದಾಳಿಯಲ್ಲಿ 86 ಮಕ್ಕಳು ಸೇರಿದಂತೆ 329 ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆನಡಾದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರ ಉಗ್ರಗಾಮಿಗಳಿಗೆ ಕೆನಡಾ ಯಾವುದೇ ಅಡೆತಡೆಯಿಲ್ಲದೇ ಸ್ಥಳಾವಕಾಶ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಯಾಗಿದೆ ಎಂದು ಭಾರತ ಹೇಳಿದೆ.