ಧಾರ್ಮಿಕ ಭಾವನೆಗಳಿಗೆ ಧಕ್ಕೆ: ‘ಯಾರಿಯಾ 2’ ಸಿನಿಮಾ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ (Bollywood) ಸಿನಿಮಾ ‘ಯಾರಿಯಾ 2’ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಲ್ಲಿ ದೂರು ದಾಖಲಾಗಿದೆ.

ಸಿಖ್ ಗುರುದ್ವಾರ್ ಪ್ರಬಂಧಕ್ ಸಮಿತಿಯು ದೂರು ದಾಖಲಿಸಿದ್ದು, ಆಕ್ಷೇಪಾರ್ಹ ದೃಶ್ಯಗಳನ್ನು ಕೂಡಲೇ ತೆಗೆಯಬೇಕೆಂದು, ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

‘ಯಾರಿಯಾ 2’ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ ಆದರೆ ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ಹಾಡಿನಲ್ಲಿ ನಾಯಕ, ಕೋಪಗೊಂಡ ನಾಯಕಿಯನ್ನು ಒಲಿಸಿಕೊಳ್ಳಲು ಹಿಂದೆ ಬಿದ್ದಿರುವ ಸನ್ನಿವೇಶವಿದೆ. ಈ ಹಾಡಿನಲ್ಲಿ ನಾಯಕ ಸಿಖ್ಖರು ಧರಿಸುವ ಕಿರ್ಪಾನ್ ಅನ್ನು ಧರಿಸಿದ್ದಾರೆ. ಇದು ಸಿಖ್ ಸಮುದಾಯದ ಆಕ್ಷೇಪಣೆಗೆ ಕಾರಣವಾಗಿದೆ.

ಈ ಬಗ್ಗೆ ಸಿಖ್ ಗುರುದ್ವಾರ್ ಪ್ರಬಂಧಕ್ ಸಮಿತಿ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಆಕ್ಷೇಪಣೆ ವ್ಯಕ್ತಪಡಿಸಿದ್ದು, ರಾಧಿಕಾ ರಾವ್ ಮತ್ತು ವಿನಯ್ ಸಪ್ರು ನಿರ್ದೇಶನದ ‘ಯಾರಿಯಾ 2’ ಸಿನಿಮಾದ ‘ಸವಾರೆ ಘರ್’ ಹಾಡಿನಲ್ಲಿ ಚಿತ್ರೀಕರಿಸಲಾಗಿರುವ ದೃಶ್ಯಗಳ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದೇವೆ. ಹಾಡಿನಲ್ಲಿ ನಟನೋರ್ವ ಸಿಖ್ಖರ ಪವಿತ್ರ ‘ಕಿರ್ಪಾನ್’ ಅನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ಧರಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಡಿಯೋ ಹಾಡು ಪ್ರಸ್ತುತ ಟಿಸೀರೀಸ್ ಯೂಟ್ಯೂಬ್ ಚಾನೆಲ್​ನಲ್ಲಿ ಲಭ್ಯವಿದ್ದು, ಈ ಕೂಡಲೇ ಈ ವಿಡಿಯೋವನ್ನು ಹಿಂಪಡೆಯಬೇಕು. ಸಿಖ್ ಸಮುದಾಯಕ್ಕೆ ಅಪಮಾನ ಮಾಡುವ ದೃಶ್ಯಗಳನ್ನು ತೆಗೆಯದೇ ಸಿನಿಮಾವನ್ನು ಬಿಡುಗಡೆ ಮಾಡಬಾರದು. ಇದಕ್ಕೆ ಸಿಬಿಎಫ್​ಸಿ ಸಹ ಅವಕಾಶ ನೀಡಬಾರದು. ಮಾತ್ರವಲ್ಲದೆ ಈ ವಿಡಿಯೋ ಹಾಡು ಲಭ್ಯವಿರುವ ಇತರೆ ಸಾಮಾಜಿಕ ಜಾಲತಾಣಗಳು, ಡಿಜಿಟಲ್ ವೇದಿಕೆಗಳಿಂದಲೂ ಹಾಡನ್ನು ತೆಗೆಯಬೇಕು. ಇಲ್ಲವಾದರೆ ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಯಾರಿಯಾ 2’ ಸಿನಿಮಾ ತಂಡವು ಸಾಮಾಜಿಕ ಜಾಲತಾಣದ ಮೂಲಕ ಸಮುದಾಯದ ಕ್ಷಮೆ ಕೇಳಿದ್ದು, ಕಿರ್ಪಾನ್ ಧರಿಸಿರುವ ದೃಶ್ಯಗಳನ್ನು ತೆಗೆಯುವುದಾಗಿ ಭರವಸೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!