October 6, 2026
Tuesday, October 6, 2026
spot_img

ಟೀಂ ಇಂಡಿಯಾ ನಾಯಕತ್ವಕ್ಕೆ ದಿಢೀರ್‌ ರಾಜೀನಾಮೆ ಘೋಷಿಸಿದ ಹರ್ಮನ್‌ಪ್ರೀತ್‌ ಕೌರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌ ತಮ್ಮ ನಾಯಕತ್ವಕ್ಕೆ ದಿಢೀರ್‌ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದ ದೀರ್ಘಾವಧಿ ನಾಯಕಿಯಾಗಿದ್ದ ಹರ್ಮ್‌ಪ್ರೀತ್‌ ರಾಜೀನಾಮೆಯಿಂದ ಪ್ರಭಾವಶಾಲಿ ಅಧ್ಯಾಯವೊಂದು ಅಂತ್ಯವಾಗಿದೆ. ದಿಢೀರ್‌ ರಾಜೀನಾಮೆಯಿಂದ ಜಾಗತಿಕ ಕ್ರಿಕೆಟ್‌ ವಲಯದಲ್ಲಿ ಭಾರೀ ಸಂಚಲನ ಮೂಡಿದ್ದು, ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರ್ಮನ್‌ಪ್ರೀತ್‌ ಸುದೀರ್ಘ ರಾಜೀನಾಮೆ ಪತ್ರವೊಂದನ್ನು ಪೋಸ್ಟ್‌ ಮಾಡಿದ್ದು, ಇದು ಕಠಿಣ ನಿರ್ಧಾರ, ಆದರೆ ಮಾಡಲೇಬೇಕಿತ್ತು ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದೇನು. ಇದು ಸುಲಭದ ನಿರ್ಧಾರ ಅಲ್ಲ. ನನ್ನ ತಂಡ ಬರೀ ತಂಡವಲ್ಲ, ಇದು ಒಂದು ಜವಾಬ್ದಾರಿ, ರಕ್ತ ಬೆವರು, ಸಮಯ, ಶ್ರಮ ಎಲ್ಲವನ್ನೂ ತಂಡಕ್ಕಾಗಿ ನೀಡಿದ್ದೀನಿ. ಇದು ನನ್ನ ದೇಶದೆಡೆಗೆ ನಾನು ಮುಡಿಪಿಟ್ಟ ಜರ್ನಿಯಾಗಿದೆ. ತಂಡದ ಹಿತದೃಷ್ಟಿಗಾಗಿ ನಾನು ಹಲವು ಬಾರಿ ನನ್ನ ವೈಯಕ್ತಿಕ ಪ್ರದರ್ಶನ ಹಾಗೂ ಬೆಳವಣಿಗೆಯನ್ನು ಬದಿಗಿಟ್ಟು ಆಟ ಆಡಿದ್ದೇನೆ. ಕ್ಯಾಪ್ಟನ್ಸಿ ವೇಳೆ ಅತ್ಯಂತ ಕಠಿಣ ನಿರ್ಧಾರವನ್ನೂ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಇದೆಲ್ಲವೂ ಪಾರ್ಟ್‌ ಆಫ್‌ ದಿ ಜರ್ನಿ

ನನ್ನ ನಿರ್ಧಾರಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಕೆಲವೊಮ್ಮೆ ತಪ್ಪು ಅರ್ಥ ಮಾಡಿಕೊಳ್ಳಲಾಯಿತು. ಆದರೆ ಪ್ರತೀ ನಿರ್ಧಾರವೂ ನನ್ನ ತಂಡಕ್ಕಾಗಿ. ತಂಡದ ಅಭಿವೃದ್ಧಿಗಾಗಿ. ಈ ಕ್ಯಾಪ್ಟನ್ಸಿಯಲ್ಲಿ ಎಲ್ಲವನ್ನೂ ನೋಡಿಬಿಟ್ಟಿದ್ದೇನೆ. ಕೆಲವೊಮ್ಮೆ ಲೋ ಮೊಮೆಂಟ್ಸ್‌, ಕೆಲವೊಮ್ಮೆ ಹೈ ಮೊಮೆಂಟ್ಸ್‌, ಹಾರ್ಟ್‌ಬ್ರೇಕ್ಸ್‌. ಇದೆಲ್ಲವೂ ಪಾರ್ಟ್‌ ಆಫ್‌ ದಿ ಜರ್ನಿ. ಸೆಲೆಬ್ರೇಷನ್‌, ದೇಶದ ವಿಕ್ಟರಿ ಎಲ್ಲವನ್ನೂ ಕಣ್ತುಂಬಿಕೊಂಡಿದ್ದೇನೆ. ನಾನು ಮಾಡಿದ ತ್ಯಾಗಗಳಿಗೆ ಬೇಸರ ಇಲ್ಲ. ಒಂದು ದಿನವೂ ವ್ಯರ್ಥ ಮಾಡದೇ ನನ್ನ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ನನ್ನ ಮನಸ್ಸು, ಶಾಂತಿ ಹಾಗೂ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು ಕ್ಯಾಪ್ಟನ್‌ ಪಟ್ಟಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ.

ಕ್ಯಾಪ್ಟನ್ಸಿ ಮುಗಿದಿದೆ ಆದರೆ ಪಯಣ ಮುಂದುವರಿದಿದೆ..

ನನ್ನ ತಂಡ ಈಗ ಒಳ್ಳೆಯ ಸ್ಥಾನದಲ್ಲಿದೆ. ನನ್ನ ಟೀಂನಲ್ಲಿ ಟ್ಯಾಲೆಂಟ್‌ ಇದೆ, ಕ್ಯಾರೆಕ್ಟರ್‌ ಇದೆ, ನಂಬಿಕೆ ಇದೆ ಹಾಗೇ ಭವಿಷ್ಯವೂ ಇದೆ. ಈ ತಂಡದ ಜೊತೆ ಮುಂದುವರಿಯುತ್ತೇನೆ. ನನ್ನ ಕರ್ತ್ಯವ್ಯ ಮುಗಿದಿದೆ ಎನಿಸುತ್ತಿದೆ. ಈ ತಂಡಕ್ಕೆ ನನ್ನೆಲ್ಲವನ್ನೂ ಕೊಟ್ಟಿದ್ದೇನೆ, ಹೆಮ್ಮೆಯಿಂದ ಇದು ನನ್ನ ಟೀಂ ಎಂದು ಹೇಳಿಕೊಳ್ಳುತ್ತೇನೆ. ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು. ಈಗ ಜೀವನದ ಹೊಸ ಪುಟವನ್ನು ತೆರೆಯುವ ಸಮಯ. ನನ್ನ ಕ್ಯಾಪ್ಟನ್ಸಿ ಇಂದು ಕೊನೆಯಾಗಲಿದೆ. ಆದರೆ ತಂಡದ ಬಗೆಗಿನ ಪ್ರೀತಿಗೆ ಕೊನೆಯೇ ಇಲ್ಲ ಎಂದಿದ್ದಾರೆ. ನನ್ನ ಟೀಮ್‌ಮೇಟ್‌ಗಳಿಗೆ, ಕೋಚ್‌ಗಳಿಗೆ, ಸಪೋರ್ಟ್‌ ಸ್ಟಾಫ್‌, ಮ್ಯಾನೇಜ್‌ಮೆಂಟ್‌, ಬಿಸಿಸಿಐ, ನನ್ನ ಕುಟುಂಬ, ಅಭಿಮಾನಿಗಳು ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ರಕ್ತ, ಬೆವರು, ತ್ಯಾಗ, ಗರ್ವ ಎಲ್ಲವನ್ನೂ ಕೊಟ್ಟಿಬಿಟ್ಟಿದ್ದೇನೆ. ಇನ್ನು ಕ್ರಿಕೆಟ್‌ನ್ನು ಮತ್ತದೇ ಹಳೇ ಪ್ರೀತಿಯಿಂದ ಆಡುತ್ತೇನೆ. ಕ್ಯಾಪ್ಟನ್ಸಿ ಮುಗಿದಿದೆ ಆದರೆ ಪಯಣ ಮುಂದುವರಿದಿದೆ ಎಂದು ಹೇಳಿಕೊಂಡಿದ್ದಾರೆ.

https://www.instagram.com/p/DeI_xMTSpXV/?utm_source=ig_embed&ig_rid=ACsMmizjbLOCoxZPl_a4iNQ

Must Read