ಹೊಸದಿಗಂತ ಡಿಜಿಟಲ್ ಡೆಸ್ಕ್
ಶಿವಮೊಗ್ಗ: ಸುಮಾರು ಒಂದುವರೆ ತಿಂಗಳ ಹಿಂದೆ ಇಲ್ಲಿನ ಭಾರತಿ ಕಾಲನಿಯಲ್ಲಿ ನಡೆದಿದ್ದ ಹರ್ಷ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷವಲ್ಲ, ಕೋಮುಗಲಭೆ ಸೃಷ್ಟಿಸುವ ಹುನ್ನಾರವಿತ್ತು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ. ಪ್ರಾಥಮಿಕ ತನಿಖಾ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಲಾಗಿದೆ.
ಹರ್ಷನನ್ನು ಫೆ. 20ರ ರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಬಳಿಕ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಸುತ್ತಿದೆ. ಎಫ್ಐಆರ್ ದಾಖಲಿಸಿಕೊಂಡ ಎನ್‌ಐಎ ಪ್ರಾಥಮಿಕ ವರದಿಯಲ್ಲಿ ಆರೋಪಿಗಳು ಕೋಮುಗಲಭೆ ಸೃಷ್ಟಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತಂದು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೊಲೆಯನ್ನು ನಡೆಸಿದ್ದರು ಎಂದು ಉಲ್ಲೇಖಿಸಿದೆ.
ಈವರೆಗೆ ವೈಯಕ್ತಿಕ ದ್ವೇಷದಿಂದ ಹರ್ಷನನ್ನು ಹತ್ಯೆಗೈಯ್ಯಲಾಗಿದೆ, ಹಳೆಯ ಗಲಾಟೆ ವಿಚಾರವಾಗಿ ಆರೋಪಿಗಳು ಹರ್ಷನನ್ನು ಕೊಲೆ ಮಾಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.