ವಿವಾದದ ಸುಳಿಯಲ್ಲಿ ಅಮೆರಿಕ ಅಧ್ಯಕ್ಷ: ಸರ್ಕಾರಿ ದಾಖಲೆ ದುರುಪಯೋಗ ಮಾಡಿಕೊಂಡಿದ್ರಾ ಬಿಡೆನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಅವರೀಗ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. 2009ರಿಂದ 2017ರವೆಗಿನ ಸಮಯದಲ್ಲಿ ಜೋ ಬಿಡೆನ್‌ ಅಮೆರಿಕದ ಉಪಾಧ್ಯಕ್ಷರಾಗಿದ್ದ ಕಾಲದ ಕೆಲ ಗೌಪ್ಯ ಸರ್ಕಾರಿ ದಾಖಲೆಗಳು ಬಿಡೆನ್‌ ಅವರಿಗೆ ಸಂಬಂಧಿಸಿದ ಕಚೇರಿಯೊಂದರಲ್ಲಿ ಸಿಕ್ಕಿರುವುದು ಬಿಡೆನ್ ವಿರುದ್ಧ ವಿವಾದಗಳೇಳಲು ಕಾರಣವಾಗಿದೆ. ಕೆಲ ತಿಂಗಳ ಹಿಂದಷ್ಟೇ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮನೆಯೊಂದರಲ್ಲಿ ಕೆಲ ಗೌಪ್ಯ ಸರ್ಕಾರಿದಾಖಲೆಗಳು ಪತ್ತೆಯಾಗಿತ್ತು. ಆಗ ಬಿಡೆನ್‌ ಸರ್ಕಾರ ಟ್ರಂಪ್‌ ವಿರುದ್ಧ ಮುಗಿಬಿದ್ದು ತನಿಖೆಗೆ ಆದೇಶಿಸಿತ್ತು. ಇದೀಗ ಇಂಥದ್ದೇ ವಿವಾದದಲ್ಲಿ ಸ್ವತಃ ಬಿಡೆನ್‌ ಸಿಲುಕಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿರೋ ವಿವಾದದ ಬಗೆಗಿನ ವರದಿ ಇಲ್ಲಿದೆ ನೋಡಿ.

ಈ ಹಿಂದೆ ಡೋನಾಲ್ಡ್‌ ಟ್ರಂಪ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆಲವು ತಿಂಗಳುಗಳ ನಂತರ 2021ರ ಸಮಯದಲ್ಲಿ ಅಮೆರಿಕದ ಸರ್ಕಾರಿ ದಾಖಲೆಗಳನ್ನು ನಿರ್ವಹಿಸುವ ನ್ಯಾಷನಲ್ ಅರ್ಕೈವ್ಸ್‌ ಸಂಸ್ಥೆ ಟ್ರಂಪ್‌ ಅಧಿಕಾರದಲ್ಲಿರುವಾಗಿನ ಸಮಯಕ್ಕೆ ಸಂಬಂಧಿಸಿದ ಕೆಲ ಮುಖ್ಯ ದಾಖಲೆಗಳು ಕಾಣೆಯಾಗಿದ್ದು ಅವುಗಳನ್ನು ನೀಡುವಂತೆ ಟ್ರಂಪ್‌ ಅವರಿಗೆ ಸೂಚಿಸಿತ್ತು. ಅಮೆರಿಕದಲ್ಲಿನ ನಿಯಮದ ಪ್ರಕಾರ ಯಾವುದೇ ಸರ್ಕಾರಿದಾಖಲೆಗಳು ಕೆಲಸವಾದ ಬಳಿಕ ನ್ಯಾಷನಲ್‌ ಅರ್ಕೈವ್ಸ್‌ ಅನ್ನು ಸೇರಬೇಕು. ಆದರೆ ಟ್ರಂಪ್‌ ಅಧಿಕಾರದ ಸಮಯದಲ್ಲಿದ್ದಾಗಿನ ಕೆಲ ದಾಖಲೆಗಳು ಸಿಕ್ಕಿಲ್ಲ ಅಂತ ನ್ಯಾಷನಲ್‌ ಅರ್ಕೈವ್ಸ್‌ ನೋಟೀಸ್‌ ಕೊಟ್ಟಿತ್ತು. ಇದಾದ ಬಳಿಕ ಟ್ರಂಪ್‌ ಅವರು ಕೆಲ ದಾಖಲೆಗಳನ್ನು ಮರಳಿಸಿದ್ದರು. ಆದರೂ ಕೆಲ ಗೌಪ್ಯ ದಾಖಲೆಗಳು ಕಾಣೆಯಾಗಿವೆ ಎಂದು ನ್ಯಾಷನಲ್‌ ಅರ್ಕೈವ್‌ ಹೇಳಿದಾಗ ಅಮೆರಿಕದ ತನಿಖಾ ಸಂಸ್ಥೆ FBI ಟ್ರಂಪ್‌ ಅವರ ನಿವಾಸ ಮಾರ್-ಎ-ಲಾಗೋ ಮೇಲೆ ದಾಳಿ ಮಾಡಿ ತನಿಖೆ ನಡೆಸಿತ್ತು. ಆ ಸಂದರ್ಭದಲ್ಲಿ ಹತ್ತಾರು ಅತಿಗೌಪ್ಯ ದಾಖಲೆಗಳು ಪತ್ತೆಯಾಗಿದ್ದವು. ಟ್ರಂಪ್‌ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಡೆನ್‌ ಸರ್ಕಾರ ಹುಯಿಲೆಬ್ಬಿಸಿತ್ತು.

ಇದಾಗಿ ಕೆಲವೇ ತಿಂಗಳುಗಳ ಬಳಿಕ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರೋ ಜೋ ಬಿಡೆನ್ ಅವರಿಗೆ ಸಂಬಂಧಿಸಿದ ಕಚೇರಿಯೊಂದರಲ್ಲಿಯೂ ಕೂಡ ಇಂಥಹದ್ದೇ ಹಲವಾರು ಸರ್ಕಾರಿ ದಾಖಲೆಗಳು ಪತ್ತೆಯಾಗಿವೆ. ನವೆಂಬರ್‌ 2022ರಲ್ಲಿ ಅಮೆರಿಕದ ಪೆನ್ಸಿಲ್ವಿಯಾ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಪೆನ್‌ ಸೆಂಟರ್‌ ಎಂಬ ವಿಚಾರ ವೇದಿಕೆಯೊಂದರಲ್ಲಿ ಹಲವಾರು ಸರ್ಕಾರಿ ದಾಖಲೆಗಳು ಪತ್ತೆಯಾಗಿವೆ. ಇದರಲ್ಲಿ ಅತಿಗೌಪ್ಯವೆಂದು ಗುರುತಿಸಲಾದ ಕೆಲ ದಾಖಲೆಗಳೂ ಪತ್ತೆಯಾಗಿವೆ. ಈ ಕಚೇರಿಯನ್ನು ಜೋ ಬಿಡೆನ್‌ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೇರುವ ಮುನ್ನ 2017ರಿಂದ 2020ರವರೆಗೆ ಬಳಸಿಕೊಂಡಿದ್ದರು. ಲಭ್ಯವಿರೋ ಮಾಹಿತಿಯ ಪ್ರಕಾರ ಇದೊಂದು ಸಂಶೋಧನಾ ಸಂಸ್ಥೆಯಾಗಿದ್ದು, ಬರಾಕ್‌ ಒಬಾಮಾ ಕಾಲದಲ್ಲಿ ಅಂದರೆ 2009 ರಿಂದ 2017ರವರೆಗೆ ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್‌ 2017ರಲ್ಲಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ. ಇಲ್ಲಿ ಪ್ರಾಧ್ಯಪನವನ್ನು ಮಾಡಿದಕ್ಕೆ ಬಿಡೆನ್ ಅವರಿಗೆ ಪೆನ್ ಸೆಂಟರ್‌ ನಿಂದ ಹಣವೂ ಸಂದಾಯವಾಗಿದೆ ಈ ಕುರಿತೂ ಬಿಸಿ ಬಿಸಿನ ಚರ್ಚೆಯಾಗುತ್ತಿದೆ. ಜೋಬಿಡನ್‌ ಅವರಿಗೆ ಸಂಬಂಧಿಸಿದ ಕಚೇರಿಯಲ್ಲಿ ಸರ್ಕಾರಿ ದಾಖಲೆಗಳು ಪತ್ತೆಯಾಗಿದ್ದು ಈಗ ಅವರ ವಿರುದ್ದ ವಿವಾದವೇಳಲು ಕಾರಣವಾಗಿದೆ. ಅವರು ಆ ಸರ್ಕಾರಿ ದಾಖಲೆಗಳನ್ನು 2020ರ ಚುನಾವಣೆಯ ವೇಳೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಟ್ರಂಪ್‌ ಈಗ ಬಿಡೆನ್ ಅಧಿಕಾರ ದುರುಪಯೋಗದ ಕುರಿತು ಆರೋಪಿಸಿದ್ದಾರೆ. ತಮ್ಮ ನಿವಾಸದ ಮೇಲೆ ದಾಳಿ ಮಾಡಿದಂತೆ ಬಿಡೆನ್ ನಿವಾಸದ ಮೇಲೆ FBI ದಾಳಿ ಮಾಡೋದು ಯಾವಾಗ ಎಂದು ಟ್ರಂಪ್‌ ಪ್ರಶ್ನಿಸಿದ್ದಾರೆ. ತಮ್ಮ ಮೇಲಿನ ದಾಳಿ ರಾಜಕೀಯ ಪ್ರೇರಿತವಾಗಿದ್ದು ಎಂದೂ ಟ್ರಂಪ್‌ ಹರಿಹಾಯ್ದಿದ್ದಾರೆ. ಆದರೆ ಈ ಕುರಿತು ಬಿಡೆನ್ ʼಸರ್ಕಾರಿ ದಾಖಲೆಗಳು ಪೆನ್ ಸೆಂಟರ್‌ ನಲ್ಲಿ ದೊರಕಿರುವುದು ಆಶ್ಚರ್ಯಕರ ಸಂಗತಿ, ಅಲ್ಲಿ ಯಾವಾಗ ಸರ್ಕಾರಿ ದಾಖಲೆಗಳನ್ನು ಕೊಂಡೊಯ್ಯಲಾಗಿದೆ ಎಂಬುದುನನಗೆ ತಿಳಿಯುತ್ತಿಲ್ಲ. ನಾನು ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆಂದುʼ ಹೇಳಿದ್ದಾರೆ. ಈ ವಿವಾದ ಈಗ ಅಮೆರಿಕದ ರಾಜಕೀಯದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!