ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಇತ್ತೀಚೆಗೆ ವಾಯು ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಅಂಕಿ-ಅಂಶಗಳ ಪ್ರಕಾರ ವಾಯು ಮಾಲಿನ್ಯ ತಗ್ಗಿದಂತೆ ಕಂಡರೂ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಕೆಲವೇ ದಿನಗಳ ಹಿಂದೆ ಅತ್ಯಂತ ಕಳಪೆ ವಾಯು ಗುಣಮಟ್ಟ ಹೊಂದಿದ್ದ ಬೆಳಗಾವಿ, ಇಂದು ರಾಜ್ಯದ ಇತರ ನಗರಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಬೆಳಗಾವಿಯ AQI ಇಂದು 62ಕ್ಕೆ ತಲುಪಿದ್ದು, ಅಲ್ಲಿನ ನಿವಾಸಿಗಳು ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮಾಲಿನ್ಯದ ಪ್ರಮಾಣ ಇಳಿಕೆಯಾಗಿರುವುದು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಇಂದಿನ AQI ದಾಖಲೆಗಳಲ್ಲಿ 114ರಷ್ಟಿದೆ. ಇದನ್ನು ಸಾಮಾನ್ಯವಾಗಿ ‘ಉತ್ತಮ’ ಅಥವಾ ‘ಸಾಧಾರಣ’ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಆದರೆ, ವಾಯು ಗುಣಮಟ್ಟ ತಜ್ಞರು ಮಾತ್ರ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕಿಗಳಲ್ಲಿ ಸಣ್ಣ ಸುಧಾರಣೆ ಕಂಡುಬಂದಿದ್ದರೂ, ಬೆಂಗಳೂರಿನ ಗಾಳಿ ಇನ್ನೂ ಅನಾರೋಗ್ಯಕರ ಮಟ್ಟದಲ್ಲೇ ಇದೆ.
WHO ನಿಗದಿಪಡಿಸಿರುವ ಕಠಿಣ ಮಾನದಂಡಗಳ ಪ್ರಕಾರ, ಪ್ರಸ್ತುತ ಬೆಂಗಳೂರಿನಲ್ಲಿರುವ ಗಾಳಿಯು ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಉಸಿರಾಟದ ಸಮಸ್ಯೆ ಇರುವವರಿಗೆ ಇದು ಮಾರಕವಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡದ ಪ್ರಮುಖ ನಗರ ಮಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ವಾಯು ಮಾಲಿನ್ಯದ ಪ್ರಮಾಣ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಅಲ್ಲಿಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ವಾಯು ಗುಣಮಟ್ಟದಲ್ಲಿ ಚೇತರಿಕೆ ಕಂಡುಬಂದಿದೆ.
ರಾಜ್ಯದ ವಿವಿಧೆಡೆ ಮಳೆ ಮತ್ತು ಪೂರಕ ಹವಾಮಾನದಿಂದಾಗಿ ಮಾಲಿನ್ಯ ಕಡಿಮೆಯಾದಂತೆ ತೋರುತ್ತಿದ್ದರೂ, ಮಾಲಿನ್ಯದ ಕಣಗಳು ಆರೋಗ್ಯದ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತಲೇ ಇವೆ. ಬೆಂಗಳೂರಿನಂತಹ ನಗರಗಳಲ್ಲಿ ಕೇವಲ ಅಂಕಿ-ಅಂಶಗಳನ್ನು ನೋಡಿ ಮೈಮರೆಯದೆ, ಮಾಲಿನ್ಯ ತಡೆಗೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.



