Sunday, December 10, 2023

Latest Posts

ಹಾಸನಾಂಬ ಉತ್ಸವ: ಭಕ್ತರಿಗಾಗಿ ಜಿಲ್ಲಾಡಳಿತ ಏನೆಲ್ಲಾ ವ್ಯವಸ್ಥೆ ಮಾಡಿದೆ ನೋಡಿ!

ಹೊಸದಿಗಂತ ವರದಿ ಹಾಸನ:

ನಗರದ ಅದಿದೇವತೆ ಎಂದೇ ಪ್ರಸಿದ್ಧಿಹೊಂದಿರುವ ಹಾಸನಾಂಬ ದೇವಿಯ ಉತ್ಸವಕ್ಕೆ ಹತ್ತು ಲಕ್ಷಕ್ಕೂ ಹೆಚು ಭಕ್ತರು ಆಗಮಿಸುವ ನಿರೀಕ್ಷೆಯಲ್ಲಿರುವ ಜಿಲ್ಲಾಡಳಿತ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮವಹಿಸಿಲು ಸಕಲಸಿದ್ಧತೆಗಳನ್ನು ಬರದಿಂದ ಮಾಡಿಕೊಳ್ಳಲು ಮುಂದಾಗಿದೆ.

‌ಹಾಸನಾಂಬ ಉತ್ಸವ‌ ನ. 2 ರಿಂದ ನ.15ರವರೆಗೂ ನಡೆಯಲಿದೆ. ಹೊರರಾಜ್ಯದಿಂದ ಸುಮಾರು ಹತ್ತು ಲಕ್ಷ ಭಕ್ತರು ಹಾಸನಾಂಬ ದರುಶನಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಮಸ್ಯೆಗಳಾಗದಂತೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ 15ದಿನಗಳ ಕಾಲ ನಗರದ ಮುಖ್ಯರಸ್ತೆ ಮತ್ತು ಸರ್ಕಾರಿ ಕಚೇರಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿಸಲು ಟೆಂಡರ್‌ ಕರೆದು ಅಂತಿಮಗೊಳಿಸಲಾಗಿದೆ. ರಾತ್ರಿವೇಳೆ ದೀಪಲಂಕಾರ ಕೂಡ ಹಾಸನಾಂಬ ಉತ್ಸವಕ್ಕೆ ಮೆರಗು ನೀಡಲಿದೆ. ಎಲ್ಲೆಡೆ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿ ಸೂಕ್ಷ್ಮ ಪ್ರದೇಶಗಳಿಗೆ ಸಮವಸ್ತ್ರ ಹಾಗೂ ಗೌಪ್ಯ ಪೊಲೀಸ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಕ್ರಮವಹಿಸಲು ಸಜ್ಜಾಗಿದೆ.

ಹಾಸನಾಂಬದೇವಿ ಗರ್ಭಗುಡಿ ಮುಂಭಾಗದ ಆವರಣ ಕಿರಿದಾಗಿರುವ ಕಾರಣ ಹಾಗೂ ಸಮರ್ಪಕ ಗಾಳಿಬೇಕೆಂಬ ಕಾರಣದಿಂದ 4 ಟನ್‌ ಎಸಿ ಘಟಕ ಅಳವಡಿಸಲಾಗುತ್ತಿದೆ. ಗಣ್ಯರು, ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ನೀಡುವ ಪಾಸ್‌ ದುರುಪಯೋಗ ತಡೆಗಟ್ಟಲು ಈ ಬಾರಿ ಪಾಸ್‌ಗೆ ಬಾರ್‌ಕೋಡ್‌ ತಂತ್ರಜ್ಞಾನ ಬಳಸಲಾಗುತ್ತಿದೆ.

ಹಾಸನಾಂಬ ದೇವಾಲಯಕ್ಕೆ ಕಳೆದ ಎಂಟು ವರ್ಷಗಳಿಂದ ಬಣ್ಣ ಬಳಿದಿರಲಿಲ್ಲ. ಈಗಾಗಲೇ ದೇವಾಸ್ಥಾನಕ್ಕೆ ಸಂಪೂರ್ಣ ಬಣ್ಣ ಬಳಿಯಲಾಗಿದೆ. ಮತ್ತು ಸಣ್ಣ ಪುಟ್ಟ ದುರಸ್ಥಿ ಕಾಮಗಾರಿಗಳು ಮುಕ್ತಾಯಗೊಂಡಿದೆ.

ಈ ಬಾರಿಯ ಹಾಸನಾಂಬ ದರ್ಶನೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಸೇರಿದಂತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ .

ನೀರು-ಮಜ್ಜಿಗೆ, ವೃದ್ಧರಿಗೆ ಪ್ರತ್ಯೇಕ ದಾರಿ

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಬಾರಿ ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಸಮೀಪದ ಬ್ರಾಹ್ಮಣ ಬೀದಿ, ಗ್ಯಾರೇಜ್ ರಸ್ತೆ ಹಾಗೂ ಸುತ್ತಮುತ್ತಲು ಹೆಚ್ಚಿನ ಬ್ಯಾರಿಕೆಡ್ ಅಳವಡಿಕೆ ಮಾಡಲಾಗುತ್ತಿದೆ. ಜರ್ಮನ್ ಟೆಂಟ್ ಹಾಗೂ ಭಕ್ತರ ಸಾಗುವ ರಸ್ತೆಯುದ್ದಕ್ಕೂ ಮ್ಯಾಟ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರು, ಮಜ್ಜಿಗೆ ದಾನಿಗಳ ಸಹಾಯದಿಂದ ವ್ಯವಸ್ಥೆ ಮಾಡುವ ಕ್ರಮ ಕೈಗೊಳ್ಳಲಾಗಿದ್ದು, ವೃದ್ಧರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆಯನ್ನು ಸಹ ಈ ಬಾರಿಯ ವಿಶೇಷವಾಗಿದೆ. ನಗರದ ಮಹಾರಾಜ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗುತ್ತಿದ್ದು 15ದಿನವು ಧ್ವನಿ ಮತ್ತು ಬೆಳಕಿನ ಕಾರಂಜಿ ವ್ಯವಸ್ಥೆಯನ್ನು ಕಲ್ಪಿಸಲು ನಗರಸಭೆಗೆ ತಿಳಿಸಲಾಗಿದೆ.

ಮಹಿಳಾ ಪೊಲೀಸ್ ವ್ಯವಸ್ಥೆಗೆ ಕ್ರಮ:

ಈ ಬಾರಿ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಮಹಿಳಾ ಭಕ್ತರು ಹಾಸನಾಂಬ ದರ್ಶನೋತ್ಸವಕ್ಕೆ ಆಗಮಿಸಲಿದ್ದಾರೆ. ಕಳೆದ ಬಾರಿಗಿಂತ ಒಂದುವರೆ ಪಟ್ಟು ಹೆಚ್ಚಿನ ಭಕ್ತರ ನಿರೀಕ್ಷೆಯಿದ್ದು ಮಹಿಳಾ ಪೊಲೀಸರನ್ನು ಹೆಚ್ಚು ನಿಯೋಜನೆ ಮಾಡುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಎಂಟು ತಂಡಗಳನ್ನು ರಚಿಸಿ ಸೂಕ್ತ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. 10.7 ಕಿಲೋಮೀಟರ್ ದರ್ಶನ ಮಾರ್ಗ ವ್ಯವಸ್ಥೆ ಮಾಡಲಾಗಿದ್ದು, ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ರೂಟ್ ಮ್ಯಾಪ್ ಸೇರಿದಂತೆ ಸಿಬ್ಬಂದಿ ನಿಯೋಜನೆ ಸಂಬಂಧ ಮುಂದಿನ ಎರಡು ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಮಾಹಿತಿ ನೀಡಲಾಗುವುದು. ದೇವಸ್ಥಾನದ ಒಳಗೆ, ಹೊರಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡಲಿದ್ದು ಆಯಕಟ್ಟು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ತಿಳಿಸಿದರು.

ಜಿಲ್ಲೆಯ ಅಧಿದೇವತೆಯ ಹಾಸನಂಬ ದರ್ಶನೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಂಟು ವರ್ಷದ ನಂತರ ಗರ್ಭಗುಡಿಗೆ ಸೇರಿದಂತೆ ಮುಖ್ಯ ಗೋಪುರಕ್ಕೆ ಬಣ್ಣ ಹಾಕಲಾಗಿದ್ದು, ಹೊಸದಾಗಿ ಕಳಸ ಪ್ರತಿಷ್ಠಾಪನೆ ಸಹ ಮಾಡಲಾಗತ್ತಿದೆ. ಎರಡು ದಿನ ತಪ್ಪಿಸಿ ಉಳಿದಂತೆ ದೇವಯ ದರುಶನ ಇರಲಿದ್ದು, ಸಾರ್ವಜನಿಕರ ಸಹಕರಿಸುವಂತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್‌ ಮನವಿ ಮಾಡಿದರು.

ದೇವಾಲಯದ ಖಾತೆಯಲ್ಲಿ 8.5 ಕೋಟಿ
ಹಾಸನಾಂಬ ದರ್ಶನೋತ್ಸವ ಸುಸೂತ್ರವಾಗಿ ನಡೆಯಲು 3.5 ಕೋಟಿ ರೂ. ಅನುದಾನ ಬಳಕೆಗೆ ಅಂದಾಜಿಸಲಾಗಿದ್ದು, ದೇವಾಲಯದ ಬ್ಯಾಂಕ್ ಖಾತೆಯಲ್ಲಿ ಒಟ್ಟು 8.5 ಕೋಟಿ ರೂ ಹಣ ಇದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಹೇಳಿದರು. ಇದುವರೆಗೂ ಸಹ ಭಕ್ತರಿಂದ ಬಂದಂತಹ ಹಣದಿಂದಲೇ ದೇವಾಲಯದ ದುರಸ್ತಿ ಹಾಗೂ ದರುಶನ ಉತ್ಸವಕ್ಕೆ ಬಳಕೆ ಮಾಡಲಾಗುತ್ತಿದೆ. ಭಕ್ತರ ಹಣ ಪೋಲಾಗದಂತೆ ಬಳಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!