ಹೊಸದಿಗಂತ ವರದಿ, ಶಿವಮೊಗ್ಗ :
ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಮೊದಲು ಸಹಿ ಹಾಕಿದ್ದು, ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಉಳಿಸುವ ಸಲುವಾಗಿ. ಆದರೆ ರಾಜ್ಯ ಸರ್ಕಾರ ನನ್ನ ಮೇಲಿನ ದ್ವೇಷಕ್ಕೆ ಸಣ್ಣಪುಟ್ಟ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿರುವುದರಿಂದ ಆ ಕಂಪನಿ ಪ್ರತೀ ದಿನ 27 ಕೋಟಿ ನಷ್ಟ ಅನುಭವಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಂಪನಿಗೆ ಗಣಿ ನೀಡಿದರೆ ಲಾಭದಾಯಕವಾಗಿ ನಡೆಸಬಹುದೆಂಬ ಉದ್ದೇಶವಿತ್ತು. ಅದಕ್ಕೆ ಅಡ್ಡಿಪಡಿಸುವ ಕೆಲಸವಾಗುತ್ತಿದೆ. ರಾಜ್ಯದಲ್ಲಿರುವ ಬೃಹತ್ ಉದ್ದಿಮೆಗಳನ್ನು ಉಳಿಸುವ ನಿಟ್ಟಿನಲ್ಲಿ ಯತ್ನ ನಡೆಸಿದರೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದರು.
ರಾಜ್ಯ ಅರಣ್ಯ ಸಚಿವರಿಗೆ ಅರಣ್ಯದ ಬಗ್ಗೆ ತಲೆಬುಡ ಗೊತ್ತಿಲ್ಲ. ಹೀಗಾಗಿ ಎಲ್ಲದ್ಕಕೂ ಅಡ್ಡಿಪಡಿಸುತ್ತಿದ್ದಾರೆ. ಗಣಿಗಾರಿಕೆ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಸಲುವಾಗಿ ಅರಣ್ಯ ಇಲಾಖೆಗೆ ಕೆಐಓಸಿಎಲ್ 190 ಕೋಟಿ ನೀಡಿದೆ. ಆದರೂ ಅಡ್ಡಿಪಡಿಸಲಾಗುತ್ತಿದೆ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಇಲ್ಲದಿದ್ದರೆ ಎಲ್ಲಾ ಯೋಜನೆಗಳನ್ನು ಎಳೆದಾಡಬೇಕಾಗುತ್ತದೆ ಎಂದರು.
2016 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಗಣಿ ಮಂಜೂರು ಮಾಡಿದ್ದು, ಈಗ ಅದಕ್ಕೆ ತಡೆ ಹಾಕುವ ಕೆಲಸ ಮಾಡಲಾಗುತ್ತಿದೆ. ಇದು ನನ್ನ ಮೇಲಿನ ದ್ವೇಷದಿಂದಲೇ ಹೊರತು ಬೇರೆ ಉದ್ದೇಶದಿಂದಲ್ಲ ಎಂದರು.
ಎಚ್‌ಎಂಟಿ ಕಂಪನಿ ದೇಶದ ಆರು ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದನ್ನು ಸಾಯಿಸಿದ್ದಾರೆ. ಆದರೆ ಜೀವ ತುಂಬುವ ಕೆಲಸ ನಾನು ಮಾಡುತ್ತಿದ್ದೇನೆ. ವಿಐಎಸ್‌ಎಲ್ ಕಾ ರ್ಖಾನೆಯನ್ನು ಉಳಿಸುವ ಒಂದಿಷ್ಟು ಕೆಲಸ ಮಾಡಲಾಗುತ್ತಿದೆ. ಆದರೆ ಬಂಡವಾಳ ಹಿಂತೆಗೆತಕ್ಕೆ ಈಗಾಗಲೇ ನಿರ್ಧಾರ ಕೈಗೊಂಡಿರುವುದರಿಂದ ಹೆಚ್ಚಿನ ಬಂಡವಾಳ ಕೂಡ ಇದಕ್ಕೆ ಬೇಕಿದೆ ಎಂದರು.
ಗ್ಯಾರಂಟಿಗೆ ವಿರೋಧವಿಲ್ಲ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವಿರೋಧವೂ ಇಲ್ಲ. ತಕರಾರು ಇಲ್ಲ. ಆದರೆ ಇವುಗಳ ಜತೆಗೆ ಅಭಿವೃದ್ಧಿಯನ್ನು ಮಾಡಲಿ ಎಂಬುದು ನನ್ನ ಆಶಯವಾಗಿದೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಕೋಟ್ಯಂತರ ರೂ. ಭ್ರಷ್ಟಾಚಾರವಾಗಿದೆ. ಇದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ನಿವೇಶನ ಮೊದಲಾದವು ಕಣ್ಣ ಮುಂದೆ ಇವೆ ಎಂದರು.