ಹೊಸದಿಗಂತ ವರದಿ, ಮಂಡ್ಯ
ಜೆಡಿಎಸ್-ಕಾಂಗ್ರೆಸ್ ಹಣಾಹಣಿಯ ನಡುವೆ ಮತ್ತೆ ಮಂಡ್ಯದಲ್ಲಿ ದ್ವೇಷದ ರಾಜಕಾರಣ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ ಜೆಡಿಎಸ್ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮುಖಂಡರಾದ ಬಿ.ಆರ್. ರಾಮಚಂದ್ರ, ರಘುನಂದನ್ ಇತರರು ಇರುವ ಫ್ಲೆಕ್ಸ್‌ಗಳನ್ನು ನಗರದಲ್ಲಿ ಅಳವಡಿಸಲಾಗಿತ್ತು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸುತ್ತಿದ್ದ ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು.
ಕಿಡಿಗೇಡಿಗಳು ನಂದಾ ಚಿತ್ರಮಂದಿರದಿಂದ ಮಹಾವೀರ ವೃತ್ತದವರೆಗೆ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಹರಿದುಹಾಕಿದ್ದಾರೆ. ಇದರಿಂದ ಮತ್ತೆ ದ್ವೇಷದ ರಾಜಕಾರಣ ಎದ್ದು ಕಾಣುತ್ತಿರುವುದು ಸ್ಪಷ್ಟವಾದಂತಾಗಿದೆ.
ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿರುವ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.