ದ್ವೇಷ ರಾಜಕಾರಣ ಸಾಮಾಜವನ್ನು ಹದಗೆಡಿಸುತ್ತಿದೆ: ಪಿ.ಜಿ.ಆರ್.ಸಿಂಧ್ಯಾ ವಿಷಾದ

ಹೊಸದಿಗಂತ ವರದಿ, ಮಡಿಕೇರಿ
ಪ್ರಸ್ತುತ ಪರಿಸ್ಥಿತಿ ಹದಗೆಡಲು ದ್ವೇಷ ರಾಜಕಾರಣ ಪ್ರಮುಖ ಕಾರಣವೆಂದು ಅಭಿಪ್ರಾಯಪಟ್ಟಿರುವ ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಪಿ.ಜಿ.ಆರ್.ಸಿಂಧ್ಯಾ, ಯಾವುದೇ ರಾಜಕೀಯ ಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಪ್ರಯತ್ನ ಮಾಡಬಾರದು ಎಂದು ಹೇಳಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಇಂದು ಜನಪರ ಚರ್ಚೆಯ ಮನೆಯಾಗಿ ಉಳಿದುಕೊಂಡಿಲ್ಲ. ವೈಯಕ್ತಿಕ ನಿಂದನೆ, ಆಪಾದನೆಗಳು, ದ್ವೇಷ, ಅಸೂಯೆ ತುಂಬಿ ವಾತಾವರಣ ಕೆಟ್ಟಿದೆ. ಇದನ್ನು ಸರಿಪಡಿಸಲು ಸೂಕ್ತ ಕ್ರಮದ ಅಗತ್ಯವಿದೆ. ಪರಿಸ್ಥಿತಿಯನ್ನು ಸುಧಾರಣೆ ಮಾಡಲು ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದಿಂದ ಪ್ರಯತ್ನ ಮಾಡಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಪಕ್ಷಾತೀತ ಮತ್ತು ಜಾತ್ಯತೀತ ಮನೋಭಾವನೆಯನ್ನು ಬೆಳೆಸುವ ಪ್ರಯತ್ನಗಳಾಗಬೇಕು, ಹಾಗಾದಾಗ ಮಾತ್ರ ಮಕ್ಕಳ ಭವಿಷ್ಯ ಉತ್ತಮವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನೆಮ್ಮದಿಯ ಬದುಕಿಗಾಗಿ ಪ್ರಕೃತಿಯ ಆಶೀರ್ವಾದ ಬೇಕು. ಅದು ಕೊಡಗಿನ ಜನರಿಗೆ ಲಭಿಸಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳಬೇಕಿದೆ ಮತ್ತು ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಯಾಗಬೇಕಿದೆ ಎಂದು ಸಿಂಧ್ಯಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!