ಮಂಗಳೂರು ಮೀನು ಸಂಸ್ಕರಣಾ ಘಟಕದಲ್ಲಿ ದುರಂತ; ಐವರು ಕಾರ್ಮಿಕರು ದುರ್ಮರಣ

ಹೊಸದಿಗಂತ ವರದಿ, ಮಂಗಳೂರು
ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಳೂರು ವಿಶೇಷ ಆರ್ಥಿಕ ವಲಯದ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಭಾನುವಾರ ರಾತ್ರಿ ನಡೆದ ದುರಂತವೊಂದರಲ್ಲಿ ಒಟ್ಟು ಐದು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ಸಮಿಉಲ್ಲಾ‌ ಇಸ್ಲಾಮ್ , ಉಮ್ಮರ್ ಫಾರೂಕ್ , ನಿಜಾಮುದ್ದೀನ್ ಆಲಿಸ್ ‌ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಮಿರಾಜುಲ್ ಇಸ್ಲಾಂ, ಶರಾಫತ್ ಆಲಿ ಎಂಬವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಹಸನ್ ಆಲಿ, ಮೊಹಮ್ಮದ್ ಕರೀಬುಲ್ಲಾ, ಹಫೀಜುಲ್ಲಾ ಎಂಬವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಮುಂಬೈ ಮೂಲದ ರಾಜು ಎಂಬವರ ಒಡೆತನದ ಶ್ರೀ ಉಲ್ಕಾ ಎಲ್ ಎಲ್ ಪಿ ಎಂಬ ಮೀನು ಸಂಸ್ಕರಣಾ ಕಂಪನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ತೊಟ್ಟಿಗೆ ಕಾರ್ಮಿಕನೊಬ್ಬ ಬಿದ್ದಾಗ ದುರಂತ ಸಂಭವಿಸಿದೆ. ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರಕ್ಷಣಾತ್ಮಕ ಉಪಕರಣಗಳನ್ನು ಒದಗಿಸದೇ ನಿರ್ಲಕ್ಷ ವಹಿಸಿದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್ ,ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ, ಸೂಪರ್ ವೈಸರ್ ಮೊಹಮ್ಮದ್ ಅನ್ವರ್ ಅನ್ನು ಹಾಗೂ ಕಂಪನಿಯ ಕಾರ್ಮಿಕರ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಸ್ಥಳೀಯ ವ್ಯಕ್ತಿ ಫಾರೂಕ್ ಆಜಾದ್ ನಗರ ಉಳ್ಳಾಲ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ವಿಚಾರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟವರ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು,ಮೃತದೇಹಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಹಸ್ತಾಂತರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!