ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಅಂಕೋಲ ತಾಲೂಕಿನ ಅಚವೆ ಗ್ರಾಮದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ವಿಭೂತಿ ಜಲಪಾತ ತುಂಬಿ ಹರಿಯುತ್ತಿದೆ. ಇದರಿಂದ ಪ್ರತಿ ಕ್ಷಣದಲ್ಲಿ ನೀರಿನ ಪ್ರಮಾಣ ಸಹ ಏರಿಳಿತವಾಗುತ್ತಿದ್ದು, ಹರಿದು ಬರುವ ನೀರಿನಲ್ಲಿ ವಿಷಜಂತುಗಳು, ಮರದ ದಿಮ್ಮಿಗಳು ತೇಲಿಬರುತ್ತಿವೆ. ಅಪಾಯವಿರುವುದರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ.
ಕಳೆದ ವರ್ಷ ಸಹ ಜುಲೈ ತಿಂಗಳಿಂದ ಮಳೆಗಾಲ ಮುಗಿಯುವವರೆಗೂ ನಿಷೇಧ ಹೇರಲಾಗಿತ್ತು. ವಿಭೂತಿ ಜಲಪಾತ ಅಂಕೋಲ ತಾಲೂಕಿನ ಗಡಿಯಲ್ಲಿ ಬರುತ್ತದೆ. ಇಲ್ಲಿನ ಜಲಪಾತ ಬೀಳುವ ಸ್ಥಳವು ಸುಣ್ಣದ ರೂಪದ ಕಲ್ಲುಗಳಿಂದ ಕೂಡಿದ್ದು ಸುತ್ತಲೂ ಅರಣ್ಯ ಗುಡ್ಡವನ್ನು ಹೊಂದಿದೆ.