ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಬಿಳಿ ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಬಿಳಿ ಬೆಳ್ಳುಳ್ಳಿಯನ್ನು ವಿಶೇಷ ಪ್ರಕ್ರಿಯೆಯಲ್ಲಿ ಹುದುಗಿಸಿದಾಗ ಅದು ಕಪ್ಪು ಬಣ್ಣ ಪಡೆದು, ಇನ್ನಷ್ಟು ಔಷಧೀಯ ಗುಣಗಳಿಂದ ಸಮೃದ್ಧವಾಗುತ್ತದೆ. ಹೀಗೆ ಸಿದ್ಧವಾಗುವ ಕಪ್ಪು ಬೆಳ್ಳುಳ್ಳಿ ಇಂದು “ಸೂಪರ್ ಫುಡ್” ಎಂದೇ ಗುರುತಿಸಿಕೊಂಡಿದೆ. ತಜ್ಞರ ಪ್ರಕಾರ, ಇದರಲ್ಲಿ ಇರುವ ಪೌಷ್ಟಿಕಾಂಶಗಳು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಹೃದಯ–ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತವೆ.
ಕಪ್ಪು ಬೆಳ್ಳುಳ್ಳಿ ಬೆಳೆಯುವುದು ಹೇಗೆ?: ಕಪ್ಪು ಬೆಳ್ಳುಳ್ಳಿ ನೈಸರ್ಗಿಕವಾಗಿ ಕಪ್ಪು ಅಲ್ಲ, ಅದನ್ನು ಎಲ್ಲಿಯೂ ಬೆಳೆಸಲಾಗುವುದಿಲ್ಲ. ಇದನ್ನು ಬಿಳಿ ಬೆಳ್ಳುಳ್ಳಿಯಿಂದ ತಯಾರಿಸಲಾಗುತ್ತೆ. ಬಿಳಿ ಬೆಳ್ಳುಳ್ಳಿಯನ್ನು ಹುದುಗಿಸಿದಾಗ, ಅದರ ಬಣ್ಣ ಕಪ್ಪು ಆಗುತ್ತದೆ. ಹುದುಗುವಿಕೆಯ ನಂತರ, ಬೆಳ್ಳುಳ್ಳಿಯ ಬಣ್ಣ ಬದಲಾದಾಗ ಅದರ ಪ್ರಯೋಜನಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ.
ಕಪ್ಪು ಬೆಳ್ಳುಳ್ಳಿಯ ಪ್ರಮುಖ ಪ್ರಯೋಜನಗಳು:
- ಕೊಬ್ಬು ಮತ್ತು ತೂಕ ನಿಯಂತ್ರಣ: ಅನೇಕ ಅಧ್ಯಯನಗಳ ಪ್ರಕಾರ ಕಪ್ಪು ಬೆಳ್ಳುಳ್ಳಿ ಸೇವನೆಯು ಹೊಟ್ಟೆಯ ಒಳಾಂಗದ ಕೊಬ್ಬು, ಯಕೃತ್ತಿನ ತೂಕವನ್ನು ಕಡಿಮೆ ಮಾಡುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಕಾರಿ.
- ಸೋಂಕು ತಡೆಯುವ ಶಕ್ತಿ: ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿವೈರಲ್ ಗುಣಗಳು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.
- ನರಮಂಡಲದ ಆರೋಗ್ಯ: ಕಪ್ಪು ಬೆಳ್ಳುಳ್ಳಿ ಸ್ಮರಣಶಕ್ತಿ ಮತ್ತು ಮೆದುಳಿನ ಕಾರ್ಯಕ್ಕೆ ಒಳ್ಳೆಯದು. ಉರಿಯೂತವನ್ನು ತಡೆದು ನರಮಂಡಲವನ್ನು ಬಲಪಡಿಸುತ್ತದೆ.
- ಕ್ಯಾನ್ಸರ್ ತಡೆಗಟ್ಟುವಿಕೆ: ಬಯೋಮೆಡಿಕಲ್ ರಿಪೋರ್ಟ್ಸ್ ಪ್ರಕಾರ, ಕಪ್ಪು ಬೆಳ್ಳುಳ್ಳಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆದು ಹೊಟ್ಟೆ, ಕೊಲೊನ್, ಲ್ಯುಕೇಮಿಯಾ ಸೇರಿದಂತೆ ಹಲವು ಕ್ಯಾನ್ಸರ್‌ಗಳಲ್ಲಿ ಸಹಕಾರಿ.
- ಮಧುಮೇಹ ಮತ್ತು ಹೃದಯದ ಆರೋಗ್ಯ: ಫ್ರಾಂಟಿಯರ್ಸ್ ಇನ್ ಫಿಸಿಯಾಲಜಿ ಪ್ರಕಾರ, ಕಪ್ಪು ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪಾಲಿಫಿನಾಲ್‌ಗಳಿಂದ ಸಮೃದ್ಧವಾಗಿರುವುದರಿಂದ ಹೃದಯ ಆರೋಗ್ಯಕ್ಕೂ ಬಹಳ ಉಪಯುಕ್ತ.
- ಕೊಲೆಸ್ಟ್ರಾಲ್ ನಿಯಂತ್ರಣ: ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಹಾಗೂ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
- ಪೌಷ್ಟಿಕಾಂಶಗಳಿಂದ ಸಮೃದ್ಧ: ಕಪ್ಪು ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಬಿ, ಸಿ, ಅಮೈನೋ ಆಮ್ಲಗಳು, ಮ್ಯಾಂಗನೀಸ್, ಸೆಲೆನಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ.