ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನಡುವಿನ ಸಮರ ತಾರಕಕ್ಕೇರಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಎಡಿಜಿಪಿ ಚಂದಶೇಖರ್ ಪರೋಕ್ಷವಾಗಿ ಕುಮಾರಸ್ವಾಮಿಯವರನ್ನ ಹಂದಿಗೆ ಹೋಲಿಸಿ ತಮ್ಮ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಈ ವಿಚಾರವಾಗಿ ಅಮಿತ್ ಶಾಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ್ ಸೇವಾ ನಿಯಮ ಉಲ್ಲಂಘಿಸಿದ್ದಾರೋ ಎಂದು ಪರಿಶೀಲಿಸಬೇಕು. ಚಂದ್ರಶೇಖರ್ ವಂಚನೆಗಳ ಬಗ್ಗೆ ಸ್ವತಂತ್ರ ಇಲಾಖಾ ತನಿಖೆ ನಡೆಸಬೇಕು. ಕರ್ನಾಟಕ ಕೇಡರ್ ಅಲ್ಲದಿದ್ದರೂ ಇಲ್ಲಿ ಇರಲು ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಕೂಡ ಪರಿಶೀಲಿಸಬೇಕಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸ್ವತಂತ್ರ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಚುನಾವಣಾ ಬಾಂಡ್ ವಿಚಾರವಾಗಿ ಎಫ್‌ಐಆರ್ ದಾಖಲಾದ ಬಗ್ಗೆಯೂ ಪ್ರಸ್ತಾಪಿಸಿದ್ದು, ಪೊಲೀಸ್ ಅಧಿಕಾರಿಗಳು, ಕಾಂಗ್ರೆಸ್ ನಾಯಕರ ನಡುವಿನ ಸಂಬಂಧದ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ.