ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಮಾಜಿ ಸಚಿವ ಜಿ ಟಿ ದೇವೇಗೌಡ ಇಂದು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಜಿ.ಟಿ.ದೇವೇಗೌಡ ಮುಂದೆ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಭೇಟಿ ಮಾಡಿ ಬಂದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಹೇಳಿಕೆ ನೀಡಿರುವ ಜಿ.ಟಿ.ದೇವೇಗೌಡ, ತಪ್ಪು ಮಾಡದೆ ಇರೋ ವಿಚಾರಕ್ಕೆ ಸಿಲುಕಿಸಿದ್ರು ಅಂತ ರೇವಣ್ಣ ಕಣ್ಣೀರು ಹಾಕಿದರು ಎಂದಿದ್ದಾರೆ.
ರೇವಣ್ಣ ಜೈಲಿಗೆ ಹೋದ ದಿನದಿಂದ ಬಂದಿರಲಿಲ್ಲ. ಅವರ ಆರೋಗ್ಯ ಉಭಯ ಕುಶಲೋಪರಿ ವಿಚಾರಿಸಲು ಬರಬೇಕೆಂದು ಮೂರು ದಿನದಿಂದ ಮನಸ್ಸಲ್ಲಿತ್ತು. ಭಾನುವಾರ ರಜೆ, ಬಿಡೋದಿಲ್ಲ ಅಂತಾ ಹೇಳಿದ್ರು. ಅದಕ್ಕೆ ಇಂದು ಮಾತನಾಡಲು ಬಂದಿದ್ದೇನೆ.ಅವರು ಆರಾಮವಾಗಿ ಕುಳಿತಿದ್ದು, ಜೊತೆಯಲ್ಲಿ ಚಹಾ ಕುಡಿದ್ವಿ. ಹಳೆ ವಿಚಾರಗಳನ್ನೆಲ್ಲ ಮೆಲುಕು ಹಾಕಿದ್ರು. ಅವ್ರಿಗೆ ಈಗಲೂ ಕೂಡ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅವ್ರಿಗೆ ಒಂದೇ ಯೋಚನೆ, ನಾನೇನೂ ತಪ್ಪು ಮಾಡಿದ್ದೀನಿ ಎಂದು. ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷವಾಗಿದೆ. ನನ್ನನ್ನ ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ಲಿ ಅನುಭವಿಸಬಹುದಿತ್ತು. ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲಾ ಎಂಬ ಕೊರಗು ರೇವಣ್ಣನಿಗೆ ಕಾಡುತ್ತಿದೆ. ಅದನ್ನು ನೆನಸಿಕೊಂಡಾಗ ದುಃಖ ಪಡ್ತಾರೆ ಎಂದರು.
ಏನೂ ತಪ್ಪು ಮಾಡದೆ ಶಿಕ್ಷೆ ಕೊಟ್ರಲ್ಲಾ ಎಂದು ರೇವಣ್ಣ ಕಣ್ಣೀರು ಹಾಕಿದ್ರು. ಒಂದು ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದ್ರು. ಈಗಲೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ನೆನೆದರು. ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಮಾತುಕತೆ ನಡೆಸಿದೆವು. ರಾಜಕೀಯವಾಗಿ ಎಲ್ಲೆಲ್ಲಿ ಎಡವಿದ್ದೇವೆ. ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ. ಶಾರ್ಟ್ ಟೈಮ್ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಯಾರ್ಯಾರು ಮಂತ್ರಿಗಳು ಮಾಡಿದ್ರಿ ಅವರೆಲ್ಲರೂ ಹೋದರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ರಿ ಎಂದರು.
ಪ್ರಜ್ವಲ್ ರೇವಣ್ಣ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಕೇಳಿದ್ದಕ್ಕೆ, ಆ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದು ಜಿಟಿಡಿ ಹೇಳಿದರು.