ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಿಂದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಯವರನ್ನು ಹೊರಗಿಟ್ಟಿರುವುದಕ್ಕೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮಾತನಾಡಿದ ಅವರು, ಪಂದ್ಯದ ವೇಳೆ ಬೆಂಚ್ ಕಾಯುತ್ತಿದ್ದ 15 ವರ್ಷದ ಬಾಲಕನ ನಿರಾಸೆಯ ಮುಖಭಾವವನ್ನು ಕಂಡು ಭಾವುಕರಾದರು.
ಮ್ಯಾನೇಜ್ಮೆಂಟ್ ವಿರುದ್ಧ ಸುನಿಲ್ ಕಿಡಿ
ಬೌಂಡರಿ ಗೆರೆಯ ಬಳಿ ಬೇಸರದಿಂದ ಹೆಜ್ಜೆ ಹಾಕುತ್ತಿದ್ದ ವೈಭವ್‌ರನ್ನು ಕಂಡು ಗವಾಸ್ಕರ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಪ್ರಶ್ನಿಸಿದರು. “ಅವನ ನಡಿಗೆಯಲ್ಲೇ ತೀವ್ರ ನಿರಾಸೆ ಎದ್ದು ಕಾಣುತ್ತಿತ್ತು. ಕೇವಲ ಮೂರು ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ಇಷ್ಟು ಸಣ್ಣ ವಯಸ್ಸಿನ ಆಟಗಾರನನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿರುವುದು ಸರಿಯಲ್ಲ” ಎಂದು ಅವರು ಅಸಮಾಧಾನ ಹೊರಹಾಕಿದರು.
ತಪ್ಪು ತಿದ್ದಿಕೊಳ್ಳಲು ಸಿಗಬೇಕಿತ್ತು ಅವಕಾಶ
ವೈಭವ್ ಹುಕ್ ಶಾಟ್ ಬಾರಿಸುವ ಯತ್ನದಲ್ಲಿ ಸತತ ಎರಡು ಬಾರಿ ವಿಕೆಟ್ ಒಪ್ಪಿಸಿರಬಹುದು. ಆದರೆ ಯುವ ಆಟಗಾರರು ತಮ್ಮ ತಪ್ಪುಗಳಿಂದ ಕಲಿಯಲು ಪಂದ್ಯಗಳ ಅನುಭವ ಅತ್ಯಗತ್ಯ ಎಂದು ಸನ್ನಿ ಅಭಿಪ್ರಾಯಪಟ್ಟರು. ಇಂಗ್ಲೆಂಡ್ ಈಗಾಗಲೇ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದರಿಂದ, ಈ ಡೆಡ್ ರಬ್ಬರ್ (ಸತ್ತ ಸರಣಿ) ಪಂದ್ಯದಲ್ಲಿ ಸೂರ್ಯವಂಶಿಗೆ ಮತ್ತೊಂದು ಅವಕಾಶ ನೀಡಬೇಕಿತ್ತು. ಮ್ಯಾನೇಜ್ಮೆಂಟ್‌ನ ಈ ದಿಢೀರ್ ನಿರ್ಧಾರ ಯುವ ಪ್ರತಿಭೆಯ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಗವಾಸ್ಕರ್ ಬೇಸರ ವ್ಯಕ್ತಪಡಿಸಿದರು.



