September 29, 2026
Tuesday, September 29, 2026
spot_img

40 ದಿನ, 70 ಬಾರಿ ಕಳ್ಳತನ! ಅಯೋಧ್ಯೆ ಮಂದಿರದ ಸಿಸಿಟಿವಿ ಮರೆಮಾಚಿ ಕೋಟಿ ಕೋಟಿ ಲೂಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಭವ್ಯ ರಾಮ ಮಂದಿರಕ್ಕೆ ಭಕ್ತರು ಸಮರ್ಪಿಸಿದ ಕಾಣಿಕೆ ಹಣವನ್ನು ಲೂಟಿ ಮಾಡಿದ ಜಾಲದ ಹಿಂದೆ ಬಾಲಿವುಡ್ ಸಿನಿಮಾಗಳನ್ನು ಮೀರಿಸುವಂತಹ ರೋಚಕ ಸಂಚು ಇರುವುದು ಬೆಳಕಿಗೆ ಬಂದಿದೆ. ಇದು ಸಾಮಾನ್ಯ ಕಳ್ಳತನವಲ್ಲ, ಬದಲಿಗೆ ಪ್ರತಿದಿನ ವ್ಯವಸ್ಥಿತವಾಗಿ ‘ಸ್ಕ್ರಿಪ್ಟ್’ ಬರೆದು ನಡೆಸುತ್ತಿದ್ದ ಸಂಘಟಿತ ಆಡಳಿತಾತ್ಮಕ ಅಪರಾಧ ಎಂದು ಎಸ್‌ಐಟಿ (SIT) ತನಿಖೆಯಿಂದ ದೃಢಪಟ್ಟಿದೆ. ಕೇವಲ 40 ದಿನಗಳ ಅವಧಿಯಲ್ಲಿ ಈ ಖದೀಮರು ಬರೋಬ್ಬರಿ 70 ಬಾರಿ ರಾಮನ ಹಣಕ್ಕೆ ಕನ್ನ ಹಾಕಿದ್ದಾರೆ.

ಸಿಸಿಟಿವಿಗೆ ಮರೆಮಾಚಿ ವಂಚನೆ

ಬ್ಯಾಂಕಿನ ಹೊರಗುತ್ತಿಗೆ ನೌಕರರಾಗಿದ್ದ ಈ ಕಿಲಾಡಿಗಳು ಕೌಂಟರ್‌ಗೆ ಬರುವ ಮುನ್ನವೇ ಇಡೀ ದಿನದ ಪ್ಲಾನ್ ಮಾಡಿಕೊಳ್ಳುತ್ತಿದ್ದರು. ಬೆಳಗ್ಗೆಯೇ ಫೋನ್ ಕರೆಗಳ ಮೂಲಕ ಯಾರು ಯಾವ ಪಾತ್ರ ವಹಿಸಬೇಕು ಎಂದು ನಿರ್ಧರಿಸಲಾಗುತ್ತಿತ್ತು. ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಬೀಳದಂತೆ ಗ್ಯಾಂಗ್‌ನ ಕೆಲವು ನೌಕರರು ಮುಂಭಾಗದಲ್ಲಿ ತಡೆಗೋಡೆಯಂತೆ ನಿಲ್ಲುತ್ತಿದ್ದರು. ಈ ಕ್ಯಾಮೆರಾ ಮರೆಯಲ್ಲಿ ಅವಿನಾಶ್ ಶುಕ್ಲಾ ಮತ್ತು ಮನೀಶ್ ಎಂಬಿಬ್ಬರು ನೋಟುಗಳನ್ನು ಬಟ್ಟೆಯೊಳಗೆ ಬಚ್ಚಿಡುತ್ತಿದ್ದರು. ಇವರಿಗೆ ಅನುಕಲ್ಪ್, ಕರುಣೇಶ್ ಮತ್ತು ಲವ್ಕುಶ್ ಎಂಬುವರು ಸಾಥ್ ನೀಡುತ್ತಿದ್ದರು.

ಸಿಸಿಟಿವಿ ದೃಶ್ಯಾವಳಿ ಡಿಲೀಟ್!

ಲೂಟಿ ಮಾಡಿದ ಹಣವನ್ನು ದಿನದ ಕೊನೆಯಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಆದರೆ ಮುಖ್ಯ ಸೂತ್ರಧಾರ ಅವಿನಾಶ್ ಹೆಚ್ಚಿನ ಪಾಲು ಪಡೆಯುತ್ತಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಕಳ್ಳತನ ನಡೆದ ಕೆಲವು ದಿನಗಳ ಸಿಸಿಟಿವಿ ದೃಶ್ಯಾವಳಿಗಳು ಡಿಲೀಟ್ ಆಗಿರುವುದು ಪತ್ತೆಯಾಗಿದೆ. ಮಂದಿರದ ಮುಖ್ಯ ಸಿಸಿಟಿವಿ ಕಂಟ್ರೋಲ್ ರೂಮ್‌ನಲ್ಲಿದ್ದ ಒಳಗಿನವರೇ ಇವರಿಗೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ.

Must Read