ಸುಪ್ರೀಂ ಕೋರ್ಟ್ ನಿಂದ 237 ಅರ್ಜಿಗಳ ವಿಚಾರಣೆ: ಸಿಎಎ ಜಾರಿಗೆ ತಡೆ ನೀಡಲು ನಿರಾಕರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಡೆ ಕೋರುವಂತೆ ಸುಪ್ರೀಂ ಕೋರ್ಟ್ ಗೆ 237 ಅರ್ಜಿಗಳು ಸಲ್ಲಿಕೆಯಾಗಿದೆ.

ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ತಡೆ ನೀಡಲು ನಿರಾಕರಿಸಿದೆ. ಜೊತೆಗೆ ವಿರೋಧ ಹಾಗೂ ತಡೆ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಜೆಬಿ ಪರಿದ್ವಾಲ್, ಮನೋಜ್ ಮಿಶ್ರಾ ಸೇರಿದ ಪೀಠ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯಕತೆ, ಇದಕ್ಕೆ ಎದುರಾಗಿರುವ ವಿರೋಧಗಳ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಏಪ್ರಿಲ್ 8ರೊಳಗೆ ಕೇಂದ್ರ ಸರ್ಕಾರಕ್ಕೆ ಈ ಕುರಿತು ಉತ್ತರ ಸಲ್ಲಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬಳಿಕ ಮುಂದಿನ ವಿಚಾರಣೆಯನ್ನು ಎಪ್ರಿಲ್ 9ಕ್ಕೆ ಮುಂದೂಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರಿಗೆ ಪೌರತ್ವ ನೀಡುವುದಿಲ್ಲ. ಇದರಿಂದಾಗಿ ಸಂವಿಧಾನದ ಮೂಲ ಆಶಯವಾಗಿರುವ ಜಾತ್ಯಾತೀತತೆಯ ಉಲ್ಲಂಘನೆ ಆಗಿದೆ. ಮೇಲಾಗಿ ಕೇಂದ್ರ ಸರ್ಕಾರ 2019ರಲ್ಲಿ ಅಂಗೀಕರಿಸಿದ ಕಾಯ್ದೆಯನ್ನು ಈಗ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಜಾರಿ ಮಾಡಿರುವ ಆತುರವೇನಿತ್ತು. ಈ ಕಾಯ್ದೆ ಅಡಿ ಮುಸ್ಲಿಮರಿಗೂ ಪೌರತ್ವ ದೊರೆಯಬೇಕು. ಈ ಅರ್ಜಿಯ ಕುರಿತು ನ್ಯಾಯಾಲಯ ತೀರ್ಪು ನೀಡುವವರೆಗೆ ಕಾಯ್ದೆ ಜಾರಿಗೆ ತಡೆ ನೀಡಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ಕೋರುವಂತೆ ಎಂಐಎಂ ಮುಖಂಡ ಅಸಾದುದ್ದೀನ್‌ ಒವೈಸಿ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!