ಹೊಸದಿಗಂತ ಡಿಜಿಟಲ್ ಡೆಸ್ಕ್;
ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗಲೇ ಮೈದಾನದಲ್ಲೇ ಹಾರ್ಟ್ ಅಟ್ಯಾಕ್ನಿಂದ ಬ್ಯಾಟ್ಸ್ಮನ್ ಕೊನೆಯುಸಿರೆಳೆದಿರುವ ಘಟನೆ ಪುಣೆಯ ಗಾರ್ವೇರ್ ಸ್ಟೇಡಿಯಂನಲ್ಲಿ ನಡೆದಿದೆ.
35 ವರ್ಷದ ಕ್ರಿಕೆಟಿಗ ಇಮ್ರಾನ್ ಪಟೇಲ್ ಮೃತ ಆಟಗಾರ.
ಪಟೇಲ್ ಓಪನಿಂಗ್ ಬ್ಯಾಟಿಂಗ್ಗೆ ಆಗಮಿಸಿ ಚೆನ್ನಾಗಿಯೇ ಬ್ಯಾಟ್ ಬೀಸುತ್ತಿದ್ದರು. ಎರಡು ಬೌಂಡರಿಗಳನ್ನು ಬಾರಿಸಿದ್ದ ಇಮ್ರಾನ್ಗೆ ಎದೆ ಹಾಗೂ ತೋಳುಗಳಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಬ್ಯಾಟಿಂಗ್ ನಿಲ್ಲಿಸಿ ಅಂಪೈರ್ ಬಳಿ ತೆರಳಿ ನನಗೆ ಎದೆ ಮತ್ತು ತೋಳುಗಳಲ್ಲಿ ತೀವ್ರವಾಗಿ ನೋವಾಗುತ್ತಿದೆ. ಬ್ಯಾಟಿಂಗ್ ಮಾಡಲು ಆಗಲ್ಲ ಎಂದು ಹೇಳಿದ್ದಾರೆ. ಇದರಿಂದ ಎಲ್ಲ ಪ್ಲೇಯರ್ಸ್ ಸಮ್ಮುಖದಲ್ಲಿ ಮೈದಾನದಿಂದ ಹೊರ ಹೋಗುತ್ತಿದ್ದರು.
ಮೈದಾನದಲ್ಲಿ ನಡೆದುಕೊಂಡು ಹೋಗುವಾಗ ಇನ್ನು ಬೌಂಡರಿ ಲೈನ್ ಬಳಿ ಹೋಗಿರಲಿಲ್ಲ. ಅವಾಗಲೇ ಕುಸಿದು ನೆಲಕ್ಕೆ ಬಿದ್ದಿದ್ದರಿಂದ ತಕ್ಷಣ ಮೈದಾನದಲ್ಲಿದ್ದ ಎಲ್ಲ ಆಟಗಾರರು ಓಡೋಡಿ ಬಂದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಜೀವ ಉಳಿಸಲು ಆಗಲಿಲ್ಲ. ದಾರಿ ಮಧ್ಯ ಅವರು ಕಣ್ಣು ಮುಚ್ಚಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಆಲ್ರೌಂಡರ್ ಆಗಿದ್ದ ಇಮ್ರಾನ್ ಸಿಕಂದರ್ ಪಟೇಲ್ ಅವರು ತುಂಬಾ ಫಿಟ್ ಆಗಿದ್ದರು. ಆರೋಗ್ಯವನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದರು. ಪ್ರತಿ ಪಂದ್ಯದಲ್ಲಿ ತುಂಬಾ ಕ್ರಿಯಾಶೀಲ ಪ್ಲೇಯರ್ ಆಗಿರುತ್ತಿದ್ದರು. ಆದರೆ ಈಗ ನಡೆದಿರುವ ಘಟನೆ ನೋಡಿದ ಸಹ ಆಟಗಾರರೆಲ್ಲಾ ದಿಗ್ಭ್ರಮೆಗೊಂಡಿದ್ದಾರೆ.