ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತೆ- ಸೊಸೆಯ ಅಂದರೆ ಅಲ್ಲಿ ಅನ್ಯೋನ್ಯತೆ ಕಾಣುವುದು ತೀರಾ ವಿರಳ . ಇಬ್ಬರ ನಡುವೆ ವೈಮನಸ್ಸುಗಳು ತೀರಾ ಸಾಮಾನ್ಯ ಎನಿಸಿದೆ.
ಆದ್ರೆ ಕೆಲವೊಮ್ಮೆ ಅಪ್ಪಿತಪ್ಪಿ ಅತ್ತೆ ಸೊಸೆ ಅನ್ಯೋನ್ಯತೆಯಿಂದ ಇರುವುದು ಕಂಡರೆ ಅದು ನಿಜಕ್ಕೂ ಆದರ್ಶಪ್ರಾಯ. ಅಂತಹ ಕ್ಷಣಕ್ಕೆ ಮಹಾರಾಷ್ಟ್ರ ಕಾರಣವಾಗಿದೆ.
ಇಲ್ಲಿ ಅತ್ತೆ- ಸೊಸೆಯ ಕಥೆ ಅಪರೂಪದಲ್ಲಿಯೇ ಅತಿ ಅಪರೂಪದ್ದು. ಇದು ಸ್ಫೂರ್ತಿಯ ಮೈನವಿರೇಳಿಸುವ ಕಥೆ.
ಹೌದು,ಮುಂಬಯಿಯ ಕಂಡಿವ್ಲಿಯಲ್ಲಿ ತಮ್ಮ 43 ವರ್ಷದ ಸೊಸೆಗೆ 70 ವರ್ಷದ ಅತ್ತೆ ಮೂತ್ರಪಿಂಡಗಳನ್ನು ದಾನ ಮಾಡಿದ ಘಟನೆ ನಡೆದಿದೆ.
2022ರ ನವೆಂಬರ್‌ನಲ್ಲಿ ಅಮಿಶಾ ಅವರಲ್ಲಿ ಮೂತ್ರಪಿಂಡ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಅವರು ಶೀಘ್ರವೇ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಬೇಕು, ಇಲ್ಲವೇ ಡಯಾಲಿಸಿಸ್ ಶುರುಮಾಡಬೇಕಾಗುತ್ತದೆ ಎಂದು ಡಾ. ಜತಿನ್ ಕೊಠಾರಿ ತಿಳಿಸಿದ್ದರು. ಅಮಿಶಾ ಮತ್ತು ಆಕೆಯ ಗಂಡ ಪೋಷಕರ ಬಳಿ ಈ ನೋವಿನ ಸಂಗತಿ ಹೇಳಿಕೊಂಡಿದ್ದರು.
ಅಮಿಶಾಳ ಅಳು ನೋಡಿ ಭಾವುಕರಾದ ನನ್ನ ಅಮ್ಮ, ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಸಿದ್ಧರಿರುವುದಾಗಿ ಹೇಳಿದರುಎಂದು ಅಮಿಶಾಳ ಭಾವ ಜಿಗ್ನೇಶ್ ತಿಳಿಸಿದ್ದಾರೆ.
ಅಮಿಶಾಳ ಗಂಡ ಜಿತೇಶ್ ಅವರಲ್ಲಿ ಇತ್ತೀಚೆಗಷ್ಟೇ ಮಧುಮೇಹ ಪತ್ತೆಯಾಗಿತ್ತು. ಹೀಗಾಗಿ ಹೆಂಡತಿಗೆ ಕಿಡ್ನಿ ನೀಡಲು ಅವರು ಸಮರ್ಥರಾಗಿರಲಿಲ್ಲ. ಆಕೆಯ ತಾಯಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರೆ, ಆಕೆಯ ತಂದೆ ಅನಿಯಂತ್ರಿತ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಹೀಗಾಗಿ ಪ್ರಭಾ ಅವರು ತಾವು ಮೂತ್ರಪಿಂಡ ದಾನ ಮಾಡುವುದಾಗಿ ಹೇಳಿದರು.
ಅವರನ್ನು ತಪಾಸಣೆಗೆ ಒಳಪಡಿಸಿದಾಗ, ಅವರು ಸಂಪೂರ್ಣ ಅರ್ಹರಾಗಿರುವುದು ದೃಢಪಟ್ಟಿತು. ಅದರಂತೆ ಜುಹುದಲ್ಲಿನ ನಾನಾವತಿ ಆಸ್ಪತ್ರೆಯಲ್ಲಿ ಆ 1ರಂದು ಮೂತ್ರಪಿಂಡ ಕಸಿ ಚಿಕಿತ್ಸೆ ನಡೆಸಲಾಯಿತು.
“ನನ್ನ ಸೊಸೆಗೆ ಕಿಡ್ನಿ ದಾನ ಮಾಡಲು ಸಾಧ್ಯವಾಗಿರುವುದು ನನಗೆ ಬಹಳ ಖುಷಿ ನೀಡಿದೆ. ನನಗೆ ಹೆಣ್ಣುಮಕ್ಕಳಿಲ್ಲ. ನನ್ನ ಮೂವರು ಸೊಸೆಯಂದಿರನ್ನೇ ನನ್ನ ಸ್ವಂತ ಹೆಣ್ಣುಮಕ್ಕಳು ಎಂದು ಭಾವಿಸಿದ್ದೇನೆ. ಅಮಿಶಾ ಅಳುತ್ತಿದ್ದಾಗ, ಆಕೆಗೆ ಸಹಾಯ ಮಾಡಲು ನಾನು ಏನಾದರೂ ಮಾಡಬೇಕು ಎಂದು ನನಗೆ ಅನಿಸಿತ್ತು ಎಂಬುದಾಗಿ ಪ್ರಭಾ ತಿಳಿಸಿದ್ದಾರೆ.
‘ನನ್ನ ಅಮ್ಮ ನನಗೆ ಜನ್ಮ ನೀಡಿದ್ದರು. ಆದರೆ ಅತ್ತೆ ನನಗೆ ಇನ್ನೊಂದು ಬದುಕನ್ನು ಉಡುಗೊರೆಯಾಗಿ ನೀಡಿದರು’ ಎಂದು ಅಮಿಶಾ ಹೇಳಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಇಂತಹ ದಾನ ನೋಡುತ್ತಿರುವುದು ಇದು ಕೇವಲ ಮೂರನೇ ಸಲ ಎಂದು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸೊಸೆ ಅಮಿಶಾ ಮೋಟಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಮೂತ್ರಪಿಂಡ ತಜ್ಞ ಡಾ. ಜತಿನ್ ಕೊಠಾರಿ ತಿಳಿಸಿದ್ದಾರೆ.