ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೇನಾ ನೇಮಕಾತಿಗಾಗಿ ಹೊಸತಾಗಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ರಕ್ಷಣಾ ಅಭ್ಯರ್ಥಿಗಳ ಪ್ರತಿಭಟನೆ ಎರಡನೇ ದಿನವೂ ಮುಂದುವರೆದಿದೆ. ಬಿಹಾರ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ತೆಲಂಗಾಣ ಸೇರಿದಂತೆ 8 ರಾಜ್ಯಗಳಲ್ಲಿ ಸಾವಿರಾರು ರಕ್ಷಣಾ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಬಿಹಾರದ ಬೆಟ್ಟಿಯಾದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಗ್ನಿಪಥದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಾದಲ್ಲಿರುವ ಕುಹಾಡಿಯಾ ನಿಲ್ದಾಣದಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು ಲಖ್ಮನಿಯಾ ರೈಲು ನಿಲ್ದಾಣದಲ್ಲಿ ರೈಲುಹಳಿಗಳನ್ನು ನಿರ್ಬಂಧಿಸಿದ್ದಲ್ಲದೇ ರೈಲ್ವೇ ನಿಲ್ದಾಣವನ್ನು ಧ್ವಂಸಗೊಳಿಸಿದ್ದಾರೆ. ಲಖೀಸರೈಯಲ್ಲಿಯೂ ಕೂಡ ರೈಲಿಗೆ ಬೆಂಕಿ ಹಚ್ಚಲಾಗಿದೆ ಈ ಘಟನೆಯಲ್ಲಿ ಪ್ರಯಾಣಿಕನೊಬ್ಬ ಸಾವನ್ನಪ್ಪಿದ್ದಾನೆ. ಕೆಲವು ಕಡೆಗಳಲ್ಲಿ ಪೋಲೀಸರು ಪ್ರತಿಭಟನಾಕಾರರನ್ನು ತಡೆಹಿಡಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರು ಸಾರ್ವಜನಿಕ ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ದೆಹಲಿಯಲ್ಲಿ ಸುಮಾರು 25 ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಗುರುಗ್ರಾಮದಲ್ಲಿ ವಾತವರಣವನ್ನು ತಿಳಿಯಾಗಿಸಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಲಿಘರ್‌ನ ತಪ್ಪಲ್ ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ತೆಲಂಗಾಣದಲ್ಲಿ ಎನ್‌ಎಸ್‌ಯುಐ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ ಒಬ್ಬರು ಸಾವನ್ನಪ್ಪಿದ್ದು 13 ಜನರಿಗೆ ಗಾಯಗಳಾಗಿವೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನೂರಾರು ವಿದ್ಯಾರ್ಥಿಗಳು ಧರಣಿಗೆ ಕುಳಿತಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪೂರ್ವಮಧ್ಯಮ ರೇಲ್ವೇಯ 59 ರೈಲುಗಳನ್ನು ರದ್ದುಪಡಿಸಲಾಗಿದೆ. ಅಲ್ಲದೇ ಹೋವ್ರಾದಿಂದ ಹೊರಡಬೇಕಿದ್ದ 3 ದೂರಮಾರ್ಗದ ರೈಲುಗಳು ಸ್ಥಗಿತಗೊಂಡಿವೆ. ಉತ್ತರಾಖಂಡದಲ್ಲೂ ಪ್ರಿಭಟನೆ ಸದ್ದು ಮಾಡಿದ್ದು ಹೆದ್ದಾರಿ ತಡೆ ನಡೆಸಲಾಗಿದೆ.
ಇನ್ನು ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಟೀಕಿಸಿದ್ದು “ಕೂಡಲೇ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ” ಆಗ್ರಹಿಸಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ” ಜನರಿಗೇನುಬೇಕು ಎಂಬುದು ಪ್ರಧಾನ ಮಂತ್ರಿಯವರಿಗೆ ತಿಳಿದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ “ಇದು ಸೇನೆಗೆ ಮಾಡಿದ ಅವಮಾನ, ದೇಶದ ಯುವಕರಿಗೆ ವಂಚನೆ” ಎಂದಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಪಕ್ಷವು ಅಗ್ನಿಪಥವನ್ನು ವಿರೋಧಿಸಿ ʼಬಿಹಾರ ಬಂದ್ʼ ಗೆ ಕರೆ ನೀಡಿದೆ.
ಇದರ ನಡುವೆಯೇ ಸರ್ಕಾರವು ನೇಮಕಾತಿಯಲ್ಲಿ ವಿನಾಯಿತಿ ನೀಡಿ ಗರಿಷ್ಟ ವಯೋಮಿತಿಯನ್ನು 23ಕ್ಕೆ ಏರಿಸಿದೆ. ಇದರ ನಡುವೆಯೂ ಕೂಡ ರಕ್ಷಣಾ ಅಭ್ಯರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ. ಸೇನಾ ಮುಖ್ಯಸ್ಥರು ಇದನ್ನು ಸ್ವಾಗತಿಸಿದ್ದು ಎರಡು ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.