ಅಸ್ಪೃಶ್ಯನೆಂದು ಕರೆದಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ ಛಲವಾದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬೆಂಗಳೂರು:
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯನವರು ʼಅಸ್ಪೃಶ್ಯ- ಗುಲಾಮ ಎಂದು ಉಲ್ಲೇಖಿಸುವ ಮೂಲಕ ನನ್ನ ಜಾತಿಗೆ ಅಪಮಾನ ಮಾಡಿದ್ದಾರೆʼ ಎಂದು ಆರೋಪಿಸಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ- ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ದೂರು ದಾಖಲಿಸಿದ್ದಾರೆ.
ಸಿದ್ದರಾಮಯ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಇಂದು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯರ ಬಗ್ಗೆ ನಮಗೆ ಬಹಳ ಗೌರವವಿದೆ. ಆದರೆ, ಅವರ ಜಿದ್ದಾಜಿದ್ದಿನ ರಾಜಕೀಯ ವಿಚಾರವಾಗಿ ನಮಗೆ ಆಕ್ಷೇಪಣೆಗಳಿವೆ ಎಂದು ತಿಳಿಸಿದ್ದಾರೆ.
ಟೀಕಿಸುವ ಬರದಲ್ಲಿ ನನ್ನನ್ನು ಗುಲಾಮರು, ಅಸ್ಪಶ್ಯನೆಂದು ಕರೆದು ನಿಂದಿಸಿದ್ದಾರೆ. ಇಂಥ ನಿಂದನೆಯ ಅಧಿಕಾರ ಅವರಿಗೆ ಇಲ್ಲ. ಎಸ್‍ಸಿ, ಎಸ್‍ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ನಾವು ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ. ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದು ಸಿದ್ದರಾಮಯ್ಯರ ದಲಿತ ವಿರೋಧಿ ಧೋರಣೆಗೆ ಸಾಕ್ಷಿ ಎಂದ ಅವರು, ದಲಿತ ಮಹಿಳೆ ಶ್ರೀಮತಿ ಮೋಟಮ್ಮನವರು ತಮ್ಮ ಆತ್ಮಕಥೆ ಪುಸ್ತಕದಲ್ಲಿ ʼಸಿದ್ದರಾಮಯ್ಯನವರು ನನ್ನ ಎಲ್ಲ ರಾಜಕೀಯ ಬೆಳವಣಿಗೆಗೂ ತಡೆ ಹಾಕಿದ್ದರುʼ ಎಂದು ಹೇಳಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ದಲಿತ ವಿರೋಧಿ ಮನಸ್ಥಿತಿ ಸಿದ್ದರಾಮಯ್ಯರ ಮೂಲಕ ವ್ಯಕ್ತವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸರಕಾರ ಹಾಗೂ ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯರನ್ನು ತಕ್ಷಣ ಬಂಧಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಛಲವಾದಿ ಅವರೊಂದಿಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!