ಹೊಸದಿಗಂತ ವರದಿ, ಗೋಕಾಕ್ :
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಗೋಕಾಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.
ಈ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಜೀವನದಿ ಘಟಪ್ರಭೆ ನದಿಯ ಜಲಾನಯನ ಪ್ರದೇಶದ ಹಾಗೂ ಬೆಳಗಾವಿ ಮತ್ತು ಮಹಾರಾಜ್ಯದ ಗಡಿಭಾಗದಲ್ಲಿ ಉತ್ತಮ ಮಳೆಯಾದಾರೇ ಸಾಕು ಗೋಕಾಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಜಲಪಾತ ಭೋರ್ಗರೆಯುತ್ತಾ ೧೮೦ ಮೀಟರ್ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ.
ಈ ಜಲಪಾತ ಉಳಿದ ಫಾಲ್ಸಗಳಿಗಿಂತ ತುಂಬಾ ವಿಭಿನ್ನವಾಗಿದೆ. ಮಳೆಗಾಲದಲ್ಲಿ ಈ ಜಲಪಾತ ಆಸ್ವಾದಿಸುವದೇ ಒಂದು ಆನಂದ. ಕೆಂಪು ಮಿಶ್ರಿತ ನೀರಿನ ಕಲರವದ ಹತ್ತಿರಕ್ಕೆ ಹೊದಂತೆ ಹಾಲಿನಂತೆ ಕಂಗೊಳಿಸುವ ಗೋಕಾಕ ಫಾಲ್ಸ, ಕರದಂಟೂ ನಗರಿ ಗೋಕಾಕ ನಗರದಿಂದ ೬ ಕಿ,ಮೀ ಅಂತರದಲ್ಲಿದೆ.