ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರು ಕೈಹಿಡಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿತ್ತು. ನಿನ್ನೆ ಸಂಜೆಯಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಬೆಂಗಳೂರು ಸಹ ಇದರಿಂದ ಹೊರತಾಗಿಲ್ಲ. ನಿನ್ನೆ ಸಂಜೆಯಿಂದ ಎಡಬಿಡದೆ ಸುರಿದ ಭಾರೀ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಬೆಳಗಾದರೂ ಬಿಡುವು ಕೊಡದ ಮಳೆರಾಯ, ಜಿಟಿಜಿಟಿ ಸುರಿಯುತ್ತಲೇ ಇದೆ.
ಯಾವ ಪ್ರದೇಶದಲ್ಲಿ ಹೆಚ್ಚು ಮಳೆ?
ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ..ಯಲಹಂಕ, ಜಕ್ಕೂರು, ಶಾಂತಿ ನಗರ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ನಂದಿನಿ ಲೇಔಟ್, ಗುಟ್ಟಹಳ್ಳಿ, ಮಲ್ಲೇಶ್ವರಂ, ಜಯನಗರ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಇನ್ನುಳಿದಂತಹ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ.
ಧರೆಗುರುಳಿದ ಮರಗಳು, ಮನೆಗಳಿಗೆ ನುಗ್ಗಿದ ನೀರು
ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವೆಡೆ ಮರಗಳು ಧರಾಶಾಹಿಯಾಗಿವೆ. ಇನ್ನೂ ತಗ್ಗುಪ್ರದೇಶಗಳಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಏಳು ಬಿಬಿಎಂಪಿ ವಲಯಗಳ 18ಕಡೆಗಳಲ್ಲಿ ಚರಂಡಿ ನೀರು ಮುಖ್ಯ ರಸ್ತೆಗೆ ಹರಿಯುತ್ತಿದ್ದು, ಗಬ್ಬು ವಾಸನೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಅನೇಕ ಅಪಾರ್ಟ್ಮೆಂಟ್ಗಳು ಬೇಸ್ಮೆಂಟ್, ಪಾರ್ಕಿಂಗ್ ಸ್ಥಳಗಳು ಜಲಾವೃತವಾಗಿತ್ತು. ವಾಹನಗಳು ನೀರಿನಲ್ಲಿ ಮುಳುಗಿವೆ.
ಬೆಂಗಳೂರಿನಲ್ಲಿ ಮಳೆಯಿಂದ ಬಂದಾಗಲೆಲ್ಲಾ ಇಷ್ಟೆಲ್ಲಾ ಅನಾಹುತವಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಬಿಬಿಎಂಪಿ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.