ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಿಂದ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಸಿದೆ. ಈ ಕುರಿತಂತೆ ತಡರಾತ್ರಿ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಬಿಬಿಎಂಪಿ ವಾರ್ ರೂಂಗೆ ದಿಢೀರ್ ಭೇಟಿ ಕೊಟ್ಟು, ಮಳೆಯಿಂದಾದ ಅನಾಹುತದ ಬಗ್ಗೆ ಮಾಹಿತಿ ಪಡೆದರು.
ವಾರ್ ರೂಂನಿಂದಲೇ ನಗರದ ಎಂಟು ಬಿಬಿಎಂಪಿ ವಲಯ ಕಚೇರಿಗಳಿಗೆ ಕರೆ ಮಾಡಿ, ಸೂಕ್ತ ವ್ಯವಸ್ಥೆ ತೆಗೆದುಕೊಳ್ಳುವಂತೆ ತಾಕೀತು ಮಾಡಿದರು. ಮರ ಬಿದ್ದ ಪ್ರದೇಶಗಳು, ನೀರು ನುಗ್ಗಿದ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದ ಸಚಿವ, ಕೂಡಲೇ ಮರಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಖಡಕ್ ಸೂಚನೆ ಕೊಟ್ಟರು.
ಅಷ್ಟೆ ಅಲ್ಲದೆ ವಾರ್ ರೂಂಗೆ ಬಂದ ಕರೆಗಳನ್ನು ಸ್ವೀಕರಿಸಿ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಅಲ್ಲದೆ ವಾರ್ ರೂಂನಲ್ಲಿರುವ ಕೆಲವು ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.