ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಭಾನುವಾರವೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ.
ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದಲ್ಲಿನ ಕುಮಾರಧಾರಾ ಸ್ನಾನಘಟ್ಟ, ಲಗೇಜ್ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲವೂ ಭಾನುವಾರ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ಕುಮಾರಧಾರೆಯ ಉಪನದಿ ದರ್ಪಣತೀರ್ಥವೂ ತುಂಬಿ ಹರಿದ ಪರಿಣಾಮ ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಪ್ರವಾಹದ ನೀರು ನುಗ್ಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಈ ಭಾಗದ ಬಹುತೇಕ ಕೃಷಿ ತೋಟಗಳಿಗೆ ನೀರು ನುಗ್ಗಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸಕಲೇಶಪುರ, ಅಡ್ಡಹೊಳೆ, ಬಿಸಲೆ, ಸುಬ್ರಹ್ಮಣ್ಯ ಕೊಲ್ಲಮೊಗ್ರು, ಕೊಡಗು ಜಿಲ್ಲೆಯ ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿ ಕೂಡಾ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಕುಮಾರಧಾರಾ ನದಿಯಲ್ಲಿ ಹೆಚ್ಚಿದ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ನದಿ ಬದಿಗೆ ತೆರಳದಂತೆ ಭಕ್ತರಿಗೆ ದೇವಾಲಯದ ಆಡಳಿತ ಸೂಚನೆ ನೀಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್, ಗೃಹರಕ್ಷಕ ಸಿಬ್ಬಂದಿಗಳು ಸ್ನಾನ ಘಟ್ಟ ಪರಿಸರದಲ್ಲಿ ನಿಗಾ ಇರಿಸಿದ್ದಾರೆ. ಸಂಭಾವ್ಯ ಸ್ಥಿತಿ ಎದುರಿಸಲು ಎಸ್‌ಡಿಆರ್‌ಎಫ್ ತಂಡವನ್ನು ಅಲರ್ಟ್ ಸ್ಥಿತಿಯಲ್ಲಿರಿಸಲಾಗಿದೆ.