ದುಬೈನಲ್ಲಿ ಭಾರೀ ಮಳೆ: ಭಾರತೀಯ ವಿಮಾನಗಳ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯುಎಇ, ಒಮಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಹಲವು ಪ್ರದೇಶಗಳಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಯುಎಇಯ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ, ಕಳೆದ 75 ವರ್ಷಗಳಲ್ಲಿ ಮೊದಲ ಬಾರಿಗೆ ಐತಿಹಾಸಿಕ ಮಳೆಯಾಗಿದೆ.

ಮಳೆಯಿಂದಾಗಿ ಪ್ರಮುಖ ಹೆದ್ದಾರಿಗಳು ಜಲಾವೃತಗೊಂಡಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ.

ಯುಎಇಯಾದ್ಯಂತ ವ್ಯಾಪಕ ಪ್ರವಾಹದಿಂದಾಗಿ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವು ಭಾರಿ ಮಳೆ ಮತ್ತು ಚಂಡಮಾರುತದಿಂದ ನಿಷ್ಕ್ರಿಯಗೊಂಡಿರುವುದರಿಂದ ದುಬೈಗೆ ಹೋಗುವ 15 ಮತ್ತು ಭಾರತಕ್ಕೆ ಹೋಗುವ 13 ಸೇರಿದಂತೆ 28 ಭಾರತೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ.

ವರದಿಯ ಪ್ರಕಾರ, ಇಂದು ಹೆಚ್ಚಿನ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆಯ ಮಧ್ಯೆ 500ಕ್ಕೂ ಹೆಚ್ಚು ವಿಮಾನಗಳನ್ನ ಬೇರೆಡೆಗೆ ತಿರುಗಿಸಲಾಗಿದೆ ಅಥವಾ ರದ್ದುಪಡಿಸಲಾಗಿದೆ.

ದುಬೈನಲ್ಲಿ ಅಧಿಕಾರಿಗಳು ನೀರನ್ನು ಪಂಪ್ ಮಾಡಲು ಟ್ಯಾಂಕರ್ ಟ್ರಕ್‌ಗಳನ್ನು ಕಳುಹಿಸಿದ್ದರಿಂದ ಮನೆಗಳು ಜಲಾವೃತಗೊಂಡವು ಮತ್ತು ವಾಹನಗಳನ್ನು ರಸ್ತೆಮಾರ್ಗಗಳಲ್ಲಿ ಕೈಬಿಡಲಾಯಿತು.

ಪ್ರಮುಖ ಶಾಪಿಂಗ್ ಮಾಲ್‌ಗಳಾದ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಜಲಾವೃತವಾಗಿದ್ದು, ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುದಿಯನ್ನು ಕೆಲವೊಮ್ಮೆ ಮಿಂಚು ಸ್ಪರ್ಶಿಸುವುದು ಕಂಡುಬಂದಿದೆ.

ಅಲ್ಲಿನ ಸರ್ಕಾರ, ಜಲಾವೃತಗೊಂಡಿರುವ ಹಲವಾರು ಪ್ರದೇಶಗಳಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವುದು ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೂಕ್ತ ಪರಿಹಾರ ಸೇರಿದಂತೆ ಹಲವಾರು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಮಳೆಯ ಆರ್ಭಟದಿಂದಾಗಿ ಯುಎಇನ ಹಲವಾರು ನಗರಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತಿದ್ದಂತೆ, ಅಲ್ಲಿನ ಸರ್ಕಾರ ಒಂದೆರಡು ದಿನಗಳ ಮಟ್ಟಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಶಾಲೆಗಳು ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಇದ್ದಕ್ಕಿದ್ದಂತೆ ಈ ಮರುಭೂಮಿಯಲ್ಲಿ ಈರೀತಿ ಮಳೆ ಬೀಳಲು ಕಾರಣವೇನು? ಎಂದು ಪ್ರಶ್ನಿಸಿದಾಗ ತಜ್ಞರು ಹೇಳುವ ಪ್ರಕಾರ,  ಮಳೆನೀರು ಅರೇಬಿಯನ್ ಪೆನಿನ್ಸುಲಾ ಮೂಲಕ ಹಾದುಹೋಗುವ ಮತ್ತು ಓಮನ್ ಕೊಲ್ಲಿಯಲ್ಲಿ ಚಲಿಸುವ ದೊಡ್ಡ ಚಂಡಮಾರುತದ ಕಾರಣದಿಂದಾಗಿದೆ. ಹವಾಮಾನ ತಜ್ಞ ಫ್ರೆಡೆರಿಕ್ ಒಟ್ಟೊ ಪ್ರಕಾರ ಈ ಮಳೆಗೆ ಹವಾಮಾನ ಬದಲಾವಣೆ ಕಾರಣ. ಅದರಲ್ಲೂ ಮಾನವನಿರ್ಮಿತ ಹವಾಮಾನ ಬದಲಾವಣೆಯಿಂದ ಹೀಗೆ ಮಳೆ ಬಂದಿದೆ ಎನ್ನುತ್ತಾರೆ.

ಇತರೆ ಹವಾಮಾನ ತಜ್ಞರ ವಾದವೇ ಬೇರೆ.  ಮೋಡ ಬಿತ್ತನೆಯ ಕಾರಣದಿಂದ ದುಬೈನಲ್ಲಿ ಇಷ್ಟೊಂದು ಮಳೆಯಾಗಿದೆ ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!