September 16, 2026
Wednesday, September 16, 2026
spot_img

ಕುಮಟಾದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ; ಕೆ.ಪಿ.ಎಸ್ ಶಾಲಾ ಕೊಠಡಿಯ ವರಾಂಡಕ್ಕೆ ಅಪ್ಪಳಿಸಿದ ಬೃಹತ್ ಬಂಡೆಗಳು!

ಹೊಸದಿಗಂತ ವರದಿ ಕುಮಟಾ:

ಕುಮಟಾ:ಭಾರೀ ಮಳೆಯಿಂದ ತಾಲೂಕಿನ ನೆಲ್ಲಿಕೇರಿಯ ಕೆ.ಪಿ.ಎಸ್ ಶಾಲಾ ಆವರಣದ ಪಕ್ಕದ ಗುಡ್ಡ ಕುಸಿದು ಭಾರೀ ಗಾತ್ರದ ಬಂಡೆಕಲ್ಲುಗಳು ಶಾಲಾ ಕೊಠಡಿಯ ವರಾಂಡಕ್ಕೆ ಅಪ್ಪಳಿಸಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ.

ಪ್ರಾಥಮಿಕ ಪೂರ್ವ ತರಗತಿಗಳಿಂದ ಪದವಿಪೂರ್ವ ತರಗತಿಗಳ ವರೆಗೆ ಸಾವಿರಾರು ವಿದ್ಯಾರ್ಥಿಗಳು ನೆಲ್ಲಿಕೇರಿಯ ಕೆ.ಪಿ.ಎಸ್ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದು, ಮಳೆಯಿಂದ ಗುಡ್ಡದ ಬೃಹತ್ ಕಲ್ಲು ಬಂಡೆಗಳು ಕುಸಿದು ಶಾಲಾ ಕಟ್ಟಡದ ಮೇಲೆ ಉರುಳುವಂತಾಗಿದೆ. ಬಂಡೆಗಳು ಬಡಿದ ಶಾಲಾ ಕೊಠಡಿಯ ವರಾಂಡದಲ್ಲಿ ಶಾಲಾ ಮಕ್ಕಳು ಬಿಸಿಯೂಟ ಮಾಡುತ್ತಾರೆ ಎನ್ನಲಾಗುತ್ತಿದ್ದು, ಊಟದ ಸಮಯಕ್ಕಿಂತ ಮೊದಲೇ ಗುಡ್ಡ ಕುಸಿತ ನಡೆದಿರುವುದರಿಂದ ಸಂಭವನೀಯ ಅಪಾಯದಿಂದ ಮಕ್ಕಳು ಪಾರಾಗಿದ್ದಾರೆ.

ಕಳೆದ ವರ್ಷ ಸಹ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಕಲ್ಲು ಬಂಡೆಗಳು ಶಾಲಾ ಆವರಣದಲ್ಲಿ ಉರುಳಿದ ಘಟನೆ ಸಂಭವಿಸಿತ್ತು. ಈ ವರ್ಷವೂ ಘಟನೆ ಮರುಕಳಿಸಿದ್ದು, ವಿದ್ಯಾರ್ಥಿ ಪಾಲಕರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ;

ಗುಡ್ಡ ಕುಸಿತದ ಸುದ್ಧಿ ತಿಳಿದಂತೆ ಶಾಸಕ ದಿನಕರ ಶೆಟ್ಟಿ, ತಹಸೀಲ್ದಾರ ಕೃಷ್ಣ ಕಾಮ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !