ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ನಗರದಾದ್ಯಂತ ಸಂಚಾರ ದಟ್ಟಣೆ ಎದುರಾಗಿ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಈ ನಡುವೆ ಬೆಂಗಳೂರು ನಗರ ಸಂಚಾರ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ.
ದಾಸರಹಳ್ಳಿ, ಮಹದೇವಪುರ, ಮಾರತ್ತಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಹುಣಸೆಮಾರನಹಳ್ಳಿ, ಹೆಬ್ಬಾಳ ಮೇಲ್ಸೇತುವೆ, ಹೊರ ವರ್ತುಲ ರಸ್ತೆ (ಒಆರ್‌ಆರ್) ಮತ್ತು ಬನ್ನೇರುಘಟ್ಟ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ.
ಇದಲ್ಲದೆ, ಕೆಂಗೇರಿ, ಮೈಸೂರು ರಸ್ತೆ, ಸಾರಕ್ಕಿ, ಜೆ.ಪಿ.ನಗರ, ಗೊರಗುಂಟೆಪಾಳ್ಯ, ಹೆಬ್ಬಾಳ ಮುಂತಾದ ಕಡೆಗಳಲ್ಲಿ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವ ಪ್ರಯಾಣಿಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು.
ವೈಟ್‌ಫೀಲ್ಡ್, ಬೆಳ್ಳಂದೂರು, ಸಿಲ್ಕ್ ಬೋರ್ಡ್ ಸೇರಿದಂತೆ ಐಟಿ ಕಾರಿಡಾರ್ ಮತ್ತು ಹೊರ ವರ್ತುಲ ರಸ್ತೆದಲ್ಲಿಯೂ ತೀವ್ರ ಸಂಚಾರ ದಟ್ಟಣೆ ಕಂಡುಬಂದಿತ್ತು. ವಿಶೇಷವಾಗಿ ಜೆಸಿ ರಸ್ತೆಯಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದು ಕಂಡು ಬಂದಿತು.