ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ಸ್ ಸಿಟಿಯಲ್ಲಿ ವರುಣ ಆರ್ಭಟ ಜೋರಾಗಿದ್ದು, ಮೆಜೆಸ್ಟಿಕ್, ವಿಧಾನಸೌಧ, ಫ್ರೀಡಂಪಾರ್ಕ್, ಮಲ್ಲೇಶ್ವರಂ, ಕಾರ್ಪೊರೇಷನ್, ಶಾಂತಿನಗರ, ರಿಚ್ಮಂಡ್ ಟೌನ್, ಲಾಲ್ಬಾಗ್, ಎಸ್ಬಿಎಂ ವೃತ್ತ ಸೇರಿದಂತೆ ಹಲವೆಡೆ ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ಮಳೆ ನೀರು ನಿಂತು ಔಟರ್ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹದೇವಪುರ ವಲಯದಲ್ಲಿ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ವೈಟ್‌ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇನ್ನು ಹಲವೆಡೆ ರಸ್ತೆಗಳನ್ನು ಅಗೆಯಲಾಗಿದೆ. ಇಷ್ಟು ದಿನ ಬಿಸಿಲು ಹಾಗೂ ಧೂಳಿನಿಂದ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರು ಇದೀಗ ನೀರು ನಿಂತಿರುವ ಗುಂಡಿಗಳ ಮೇಲೆ ಚಲಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಪಣತ್ತೂರು ಸೇತುವೆ ಯಿಂದ ಕಾಡುಬೀಸನಹಳ್ಳಿ ಕಡೆಗೆ, ಕಸ್ತೂರಿ ನಗರದಿಂದ ರಾಮಮೂರ್ತಿ ನಗರದ ಕಡೆಗೆ, ದಾಲ್ಮೀಯಾ ಟು ವೆಗಾ ಸಿಟಿ ಮಾಲ್, ಹಾರೇಹಳ್ಳಿ ಮುಖ್ಯ ರಸ್ತೆ ಯಿಂದ ವಿಷ್ಣುವರ್ಧನ ರಸ್ತೆ ಕಡೆಗೆ ಮಳೆ ನೀರು ನಿಂತಿರುವುದರಿಂದ ಸಂಚಾರ ದಟ್ಟಣೆ ಇರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೂ ರಾಜಾಜಿನಗರದಲ್ಲಿ ಮಳೆ ಜೋರಾಗಿ ಸುರಿದಿದ್ದು, ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ಮರ ಬಿದ್ದಿದೆ. ಪರಿಣಾಮ ಸ್ಕಾರ್ಫಿಯೋ ಮತ್ತು ಸ್ವಿಫ್ಟ್ ಕಾರಿನ ಜೊತೆಗೆ ಪಕ್ಕದಲ್ಲಿದ್ದ ಬೈಕ್‌ಗಳು ಜಖಂಗೊಂಡಿವೆ. ಮರ ಬಿದ್ದು ರಸ್ತೆ ಬ್ಲಾಕ್ ಆಗಿದ್ದು, ಸ್ಥಳಕ್ಕೆ ಬಿಬಿಎಂಪಿ ಹಾಗೂ ಕೆ.ಇ.ಬಿ ಸಿಬ್ಬಂದಿ ಭೇಟಿ ನೀಡಿದ್ದು, ಮರ ತೆರವುಗೊಳಿಸುತ್ತಿದ್ದಾರೆ.