ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರವೇಶ ಮಾಡುತ್ತಿದ್ದು , ರವಿವಾರ ಸಂಜೆ ಮಳೆ ಜೊತೆಗೆ ರಭಸದ ಜೋರಾದ ಬಿರುಗಾಳಿಗೆ ಭಾಲ್ಕಿ ತಾಲೂಕಿನ ಅಳವಾಯಿ ಹಾಗೂ ತೂಗಾಂವ (ಎಚ್) ಗ್ರಾಮದಲ್ಲಿ ರವಿವಾರ ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರಳಿದರೆ, ಸುಮಾರು ಜನರ ಮನೆಯ ಮೇಲಿನ ಪತ್ರಗಳು ಹಾರಿ ಹೋಗಿವೆ.
ಗ್ರಾಮದ ಲಕ್ಷ್ಮಿ ದೇವಾಲಯದ ಹಿಂಬದಿಯ ಬಡಾವಣೆಯ ವಿದ್ಯುತ್ ಕಂಬ ಮನೆಯ ಮೇಲೆ ಮುರಳಿ ಬಿದ್ದಿದೆ. ಔರಾದ್ ಶಹಾಜಿನಿ ಹಾಗೂ ವಲಂಡಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ತಂತಿ ಕಡೆದು ಬಿದ್ದಿವೆ. ರಸ್ತೆ ಮೇಲೆ ಮರ ಉರುಳಿ ಬಿದ್ದಿದ್ದರಿಂದ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು . ತೂಗಾಂವ್ (ಎಚ್) ಹಾಗೂ ಮೇಹಕರ್ ಮುಖ್ಯ ರಸ್ತೆಯ ಮೇಲೆ ಆಲದ ಮರ ಉರಳಿ ಬಿದ್ದಿದ್ದರಿಂದ ಸಂಚಾರಕ್ಕೆ ಸಂಚಕಾರ ಉಂಟು ಮಾಡಿದೆ.
ಮಳೆ ಹಾಗೂ ಬಿರುಗಾಳಿ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಕಡಿತ ಮಾಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ . ಜೆಸ್ಕಾಂ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ವಿದ್ಯುತ್ ಕಂಬಗಳನ್ನು ಸರಿಪಡಿಸಿ ರಾತ್ರಿ ವಿದ್ಯುತ್ ಸರಬರಾಜು ಮಾಡುವ ಸಿದ್ಧತೆಯಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂತು.