ಹೊಸದಿಗಂತ ವರದಿ, ಕಾರವಾರ:
ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶದಲ್ಲಿರುವವರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ಜಿಲ್ಲೆಯಲ್ಲಿ ಇನ್ನೂ 3 ರಿಂದ 4 ದಿನಗಳು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 2 ರಾಷ್ಟಿಯ ವಿಪತ್ತು ನಿರ್ವಹಣಾ ತಂಡಗಳನ್ನು ಕಳುಹಿಸುವಂತೆ ಕೋರಿದ್ದು, ಈಗಾಗಲೇ ಈ ತಂಡಗಳು ಬೆಂಗಳೂರಿನಿ0ದ ಹೊರಟ್ಟಿದ್ದು ಶುಕ್ರವಾರ ಈ ತಂಡಗಳು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಈ ಎನ್.ಡಿ.ಆರ್.ಎಫ್ ನ ಪ್ರತಿ ತಂಡದಲ್ಲಿ ತಲಾ 25 ಮಂದಿ ರಕ್ಷಣಾ ಸಿಬ್ಬಂದಿಗಳಿರಲಿದ್ದು, ಈ ತಂಡವನ್ನು ಕಾರವಾರ, ಕುಮುಟಾ ಮತ್ತು ಅಂಕೋಲ ಭಾಗದಲ್ಲಿ ನಿಯೋಜಿಸಲಾಗುವುದು.
ಅಘನಾಶಿನಿ ಮತ್ತು ಶರಾವತಿ ನದಿಗಳು ತುಂಬಿ ಹರಿಯುತ್ತಿದ್ದು ಈ ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.ಕಾಳಿ ನದಿಯಲ್ಲಿನ ಅಪ್ಪರ್ ಕಾನೇರಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವರಿಗೆ ಸರ‍್ಷಕಿತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚಿಸಲಾಗಿದೆ.
ಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಉಚಿತ ತುರ್ತ ಸಹಾಯವಾಣಿ ಸಂಖ್ಯೆ 1077 ಗೆ ಹಾಗೂ ಮೊ.ಸಂ. ಸಂಖ್ಯೆ 94835 11015 ಕರೆ , ಮೆಸೆಜ್, ವಾಟ್ಪಾಪ್ ಸಂದೇಶ ಮತ್ತು ವಾಟ್ಸಾಪ್ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.