ಹೊಸ ದಿಗಂತ ವರದಿ, ಕಾರವಾರ:
ಶಾಸಕಿ ರೂಪಾಲಿ ಎಸ್.ನಾಯ್ಕ ಭಾರಿ ಮಳೆಯಿಂದ ಜಲಾವೃತವಾದ ಅರಗಾ, ಚೆಂಡಿಯಾ, ಮುದಗಾಗಳಿಗೆ ಭೇಟಿ ನೀಡಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿದರು. ಪ್ರವಾಹಕ್ಕೆ ಕಾರಣರಾದ ಐಆರ್ ಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ನೌಕಾನೆಲೆಗೂ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಜಲಾವೃತವಾಗಿ ತೊಂದರೆಗೊಳಗಾದ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ ಶಾಸಕರು, ಮನೆಗಳಿಗೆ ನೀರು ನುಗ್ಗಿದಲ್ಲಿ ಆ ಮನೆಯಲ್ಲಿರುವ ಜನರಿಗೆ ತಾತ್ಕಾಲಿಕವಾಗಿ ಬೇರೆ ಕಡೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅವೈಜ್ಞಾನಿಕ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಕೃತಕ ಪ್ರವಾಹ ಸೃಷ್ಟಿಯಾಗುತ್ತಿದೆ. ನೆಲಮಟ್ಟಕ್ಕಿಂತ 7 ಅಡಿಗಳಷ್ಟು ಎತ್ತರಕ್ಕೆ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಗುಡ್ಡದಿಂದ ಹರಿದುಬರುವ ಮಳೆ ನೀರು ಹರಿದುಹೋಗಲು ಅಗತ್ಯ ಸೇತುವೆ, ಪೈಪ್ ಅಳವಡಿಸದೆ ಇರುವುದರಿಂದ ಹೆದ್ದಾರಿಯ ಒಂದು ಪಾರ್ಶ್ವದಲ್ಲಿರುವ ಮನೆಗಳು ಜಲಾವೃತವಾಗುತ್ತಿದೆ. ಇದಕ್ಕೆ ನೀವೇ ಹೊಣೆಗಾರರು ಎಂದು ಐಆರ್ ಬಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಮಳೆ ಬೀಳುತ್ತಿದ್ದಂತೆ ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ನೀರು ಬರುತ್ತದೆ. ಆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನೌಕಾನೆಲೆ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿಗಳಿಂದ ನೀರಿನ ಹರಿವಿಗೆ ಅಡ್ಡಿ ಉಂಟಾಗುತ್ತಿದೆಯೇ ಎಂದು ಶಾಸಕರು ಪರಿಶೀಲಿಸಿದರು. ಚರಂಡಿಯಲ್ಲಿ ತ್ಯಾಜ್ಯ ತುಂಬಿ ನೀರು ಹರಿದುಹೋಗದೆ ಇರುವುದನ್ನು ಶಾಸಕರು ನೌಕಾನೆಲೆ ಅಧಿಕಾರಿಗಳ ಗಮನಕ್ಕೆ ತಂದರು. ಯಾವುದೇ ಕಾರಣಕ್ಕೂ ನೀರಿನ ಹರಿವಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ನೌಕಾನೆಲೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸೀಬರ್ಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬ್ಲಾಕ್ ಆಗಿರುವ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ನೌಕಾನೆಲೆಗೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದರು. ಕಾರವಾರ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ ಎನ್.ಎಫ್.ನೊರೋನಾ ಮತ್ತಿತರರು ಪಾಲ್ಗೊಂಡಿದ್ದರು.