ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ರುದ್ರಪ್ರಯಾಗದಲ್ಲಿ ರಕ್ಷಣಾ ಮತ್ತು ಪುನಃಸ್ಥಾಪನೆ ಕಾರ್ಯ ಮುಂದುವರೆದಿದೆ, ಕೇದಾರನಾಥ ಧಾಮಕ್ಕೆ ಹೋಗುವ ಮಾರ್ಗಕ್ಕೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರಾಖಂಡ ವಿಪತ್ತು ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಮಾತನಾಡಿ, ಮಾರ್ಗದಲ್ಲಿ ಸಿಲುಕಿರುವ 3,000 ಜನರನ್ನು ಇದುವರೆಗೆ ರಕ್ಷಿಸಲಾಗಿದೆ ಆದರೆ ಕೇದಾರನಾಥದಲ್ಲಿ ಇನ್ನೂ ಸುಮಾರು 1,000 ಜನರು ರಕ್ಷಣೆಗಾಗಿ ಕಾಯುತ್ತಿದ್ದಾರೆ ಎಂದರು.
“ಇಡೀ ಉತ್ತರಾಖಂಡ್ ರಾಜ್ಯದಲ್ಲಿ ಹವಾಮಾನ ಉತ್ತಮವಾಗಿದೆ, ಭಾರೀ ಮಳೆ ಇಲ್ಲ ಮತ್ತು ನಾಳೆ ಉತ್ತರಕಾಶಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ ಅಂದರೆ ಸ್ವಲ್ಪ ಪ್ರಮಾಣದ ಮಳೆಯಾಗಲಿದೆ” ಎಂದು ಅವರು ಹೇಳಿದರು.
“ಎಲ್ಲಾ ಪ್ರಮುಖ ಮಾರ್ಗಗಳು ತೆರೆದಿದ್ದು, ಕೇದಾರನಾಥದಿಂದ ಗೌರಿಕುಂಡ್ ನಡುವಿನ ಮಾರ್ಗ ಮಾತ್ರ ತೆರೆದಿಲ್ಲ. ನಿನ್ನೆ, ನಾವು 2,300 ಜನರನ್ನು ಗೌರಿಕುಂಡ್ನಿಂದ ಸೋನ್ಪ್ರಯಾಗಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. 700 ಜನರನ್ನು ಏರ್ಲಿಫ್ಟ್ ಮಾಡಲಾಗಿದೆ. ಇದುವರೆಗೆ 3,000 ಜನರನ್ನು ರಕ್ಷಿಸಲಾಗಿದೆ” ಎಂದು ಹೇಳಿದರು.
“ಪ್ರಸ್ತುತ, 1000 ಜನರು ಕೇದಾರನಾಥದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ. ಅಲ್ಲಿ ಯಾವುದೇ ವಿಪತ್ತಿನಂತಹ ಪರಿಸ್ಥಿತಿ ಇಲ್ಲ” ಎಂದು ತಿಳಿಸಿದ್ದಾರೆ.