ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಮುಂಗಾರು ಪೂರ್ವ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಬದರಿನಾಥ್, ಕೇದಾರ್‌ನಾಥ್ ಮತ್ತು ಸಿಖ್ಖರ ಪವಿತ್ರ ಕ್ಷೇತ್ರ ಹೇಮಕುಂಡ್ ಸಾಹಿಬ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ರೆಡ್ ಅಲರ್ಟ್ ಘೋಷಣೆ
ವರುಣನ ಆರ್ಭಟಕ್ಕೆ ಹೆದ್ದಾರಿಗಳ ಮೇಲೆ ಭೀಕರ ಭೂಕುಸಿತ ಸಂಭವಿಸುತ್ತಿದ್ದು, ರಾಜ್ಯ ದುರಂತ ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಇಡೀ ಚಾರ್ ಧಾಮ್ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ.
ವಾಹನ ಸಂಚಾರ ಸಂಪೂರ್ಣ ಸ್ಥಗಿತ
ಉತ್ತರಾಖಂಡದ ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಯಲ್ಲೂ ಮಳೆಯ ತೀವ್ರತೆಗೆ ಪರ್ವತಗಳ ಮೇಲಿದ್ದ ಬೃಹತ್ ಗಾತ್ರದ ಕಲ್ಲುಗಳು ಮತ್ತು ಮಣ್ಣು ಕರಗಿ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಬೀಳುತ್ತಿದೆ. ಬದರಿನಾಥಕ್ಕೆ ಸಾಗುವ ಪ್ರಮುಖ ರಸ್ತೆಗಳು ಹಲವೆಡೆ ಬಂದ್ ಆಗಿವೆ. ಇದರಿಂದಾಗಿ ಋಷಿಕೇಶ-ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ಜೋಶಿಮಠ ಮತ್ತು ಗೋವಿಂದಘಾಟ್ ನಡುವಿನ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆಯ ಜೊತೆಗೆ ಮಂಜು ಮುಸುಕಿದ ವಾತಾವರಣ ಇರುವುದರಿಂದ ಹೆಲಿಕಾಪ್ಟರ್ ಸೇವೆಗಳನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಯಾತ್ರಿಕರ ರಕ್ಷಣೆಗೆ ಕ್ರಮ
ಯಾತ್ರಿಕರ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾಗಿದೆ. ಹವಾಮಾನ ಇಲಾಖೆಯು ಮುಂದಿನ ೨೪ ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಆದ್ದರಿಂದ ಬದರಿನಾಥ್ ಮತ್ತು ಕೇದಾರ್‌ನಾಥ್ ಕಡೆಗೆ ಸಾಗುತ್ತಿದ್ದ ಭಕ್ತರನ್ನು ಅವರು ಎಲ್ಲಿದ್ದಾರೋ ಅಲ್ಲೇ ಸುರಕ್ಷಿತ ಸ್ಥಳಗಳಲ್ಲಿ ತಂಗುವಂತೆ ಸೂಚಿಸಲಾಗಿದೆ. ರಸ್ತೆಗಳನ್ನು ಕಲ್ಲು-ಮಣ್ಣುಗಳಿಂದ ಮುಕ್ತಗೊಳಿಸುವವರೆಗೂ ಯಾರೂ ಮುಂದೆ ಸಾಗಬಾರದು ಎಂದು ಚಮೋಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿದೆ.
ಹೇಮಕುಂಡ್ ಸಾಹಿಬ್ ಯಾತ್ರೆ ಸ್ಥಗಿತ
ಸಿಖ್ಖರ ಪವಿತ್ರ ತೀರ್ಥಕ್ಷೇತ್ರ ಹೇಮಕುಂಡ್ ಸಾಹಿಬ್ ಯಾತ್ರೆಯನ್ನೂ ನಿಲ್ಲಿಸಲಾಗಿದ್ದು, ಭೀಕರ ಮಳೆಯ ಜೊತೆಗೆ ಮೇಲ್ಭಾಗದಲ್ಲಿ ಲಘು ಹಿಮಪಾತ ವರದಿಯಾಗಿದೆ. ಗುರುದ್ವಾರದ ಕಡೆಗೆ ಹೆಜ್ಜೆ ಇಡುತ್ತಿದ್ದ ನೂರಾರು ಸಿಖ್ ಭಕ್ತರನ್ನು ಘಂಗಾರಿಯಾ ಬೇಸ್ ಕ್ಯಾಂಪ್‌ನಲ್ಲೇ ತಡೆದು ನಿಲ್ಲಿಸಿ, ಅವರಿಗೆ ಅಗತ್ಯ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.



