Sunday, October 12, 2025

ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಿಂದ ಭೂಕುಸಿತ: ಐವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಭಾರೀ ಮಳೆಯ ಪರಿಣಾಮವಾಗಿ ಮಿರಿಕ್, ಡಾರ್ಜಿಲಿಂಗ್ ಮತ್ತು ಸುಖಿಯಾ ಪ್ರದೇಶಗಳಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿದ್ದು, ಒಂದು ಮಗು ಸೇರಿ, ಕನಿಷ್ಠ ಐವರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ನಿರಂತರ ಮಳೆಯ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮಿರಿಕ್‌ನ ಜಸ್ಬೀರ್ ಬಸ್ತಿ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸುಖಿಯಾ ಪೊಖರಿ ಬ್ಲಾಕ್‌ನ ಬಿಜುವಾ ಗ್ರಾಮದಲ್ಲಿ 78 ವರ್ಷದ ರಾಘುಬೀರ್ ರೈ ಅವರ ಮನೆಯ ಮೇಲೆ ಭೂಕುಸಿತ ಸಂಭವಿಸಿದ್ದು, ಅವರ ನಾಲ್ಕು ಕುಟುಂಬ ಸದಸ್ಯರು ಪಾರಾಗಿದ್ದಾರೆ. ಕಾಲಿಂಪಾಂಗ್‌ನಲ್ಲಿ ಒಂದು ಮಗು ಸೇರಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಈ ಪ್ರದೇಶಗಳಲ್ಲಿ ಭಯ ಮತ್ತು ಆತಂಕವು ಹೆಚ್ಚಿದ್ದು, ಹಲವರು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಗೊಂಡಿದ್ದಾರೆ.

ಡಾರ್ಜಿಲಿಂಗ್ ಜಿಲ್ಲಾ ಪೊಲೀಸ್ ಮತ್ತು ರಕ್ಷಣಾ ತಂಡಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 717E ಮತ್ತು ಪೆಡಾಂಗ್-ರಿಷಿಖೋಲಾ ಮಾರ್ಗಗಳು ಭೂಕುಸಿತಗಳಿಂದ ಮುಚ್ಚಲಾಗಿದೆ. ಟಾಯ್ ಟ್ರೈನ್ ಸೇವೆಗಳೂ ಸ್ಥಗಿತಗೊಂಡಿವೆ. ಭಾರತೀಯ ಹವಾಮಾನ ಇಲಾಖೆ (IMD) ಡಾರ್ಜಿಲಿಂಗ್, ಜಲ್ಪೈಗುರಿ, ಕಾಲಿಂಪಾಂಗ್ ಮತ್ತು ಕೂಚ್‌ಬೆಹಾರ್‌ ಪ್ರದೇಶಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಅಲಿಪುರ್ದೂರ್‌ನಲ್ಲಿ ರೆಡ್ ಅಲರ್ಟ್ ಜಾರಿಯಾಗಿದೆ.

ಪಶ್ಚಿಮ ಬಂಗಾಳ ಸರ್ಕಾರ NDRF, ಪೊಲೀಸ್ ಮತ್ತು ಫೈರ್ ಸರ್ವಿಸ್ ತಂಡಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೀಡಿತರಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.

error: Content is protected !!